ಜುಲೈನಿಂದ ಶಾಲೆಗಳು ಆರಂಭ: ಶಿಕ್ಷಣ ತಜ್ಞರ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜೂನ್ ತಿಂಗಳವರೆಗೆ ಕಾದು ನೋಡಿ, ಜುಲೈನಿಂದ ಶಾಲೆಗಳನ್ನು ದೇಶಾದ್ಯಂತ ಆರಂಭಿಸಬೇಕೆಂದು ಶಿಕ್ಷಣ ತಜ್ಞರ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಕೊರೊನಾ ಸೋಂಕು ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಂದ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು.
ಆದರೆ, ಶಾಲೆಗಳು ಯಾವಾಗ ಪ್ರಾರಂಭಿಸಬೇಕು? ಪರೀಕ್ಷೆಗಳು ಯಾವಾಗ ನಡೆಸಬೇಕು? ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಕೇಂದ್ರ ಸರ್ಕಾರ ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಿತ್ತು. ದೇಶಾದ್ಯಂತ ಜುಲೈನಿಂದಲೇ ಶಾಲೆಗಳನ್ನು ಆರಂಭ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.ಕೊರೊನಾ ವೈರಾಣು ದೇಶದಲ್ಲಿ ತ್ವರಿತ ಗತಿಯಲ್ಲಿ ಹಬ್ಬುತ್ತಿದ್ದು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಯಾವ ಪರೀಕ್ಷೆಗಳು ನಡೆಯುವುದಿಲ್ಲ. ಶೈಕ್ಷಣಿಕ ವರ್ಷವನ್ನು ತಡವಾಗಿ ಆರಂಭಿಸಿ, ಎಲ್ಲರು ಜೂನ್ ಅಲ್ಲದೆ ಜುಲೈವರೆಗೂ ಕಾದು ಆನಂತರ ಶಾಲೆಗಳನ್ನು ಆರಂಭಿಸಿ ಎಂದು ತಜ್ಞರು ವರದಿಯಲ್ಲಿಉಲ್ಲೇಖಿಸಿದ್ದಾರೆ.
ತಜ್ಞರು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಜುಲೈನಿಂದಲೇ ಶಾಲೆಗಳು ಮತ್ತೆ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ತಜ್ಞರ ಸಮಿತಿ ನೀಡಿರುವ ವರದಿಯನ್ನಾಧರಿಸಿ ಜೂನ್ ತಿಂಗಳಾಂತ್ಯದವರೆಗೂ ಕಾದು ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಮೊದಲು ಹಸಿರು ಮತ್ತು ಕಿತ್ತಳೆ ವಲಯಗಳ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭ ಮಾಡಲು ಚಿಂತನೆ ನಡೆಸಲಾಗಿದೆ. ನಂತರ ಪರಿಸ್ಥಿತಿ ಸುಧಾರಿಸಿದರೆ ಕೆಂಪು ವಲಯದಲ್ಲೂ ಶಾಲೆಗಳ ಆರಂಭಕ್ಕೆ ಅವಕಾಶ ನೀಡಲಾಗುವುದು. ಹಿರಿಯ ಮಕ್ಕಳು ಮಾತ್ರ ಮನೆ ಯಲ್ಲಿಯೇ ಅಧ್ಯಯನ ಮುಂದುವರೆಸುವಂತೆ ಸೂಚಿಸುವ ಸಾಧ್ಯತೆ ಹೆಚ್ಚಾಗಿದೆ.