ರಾಜ್ಯದಲ್ಲಿರುವ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ- ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಬೆಂಗಳೂರು ಜು.20: ರಾಜ್ಯದಲ್ಲಿರುವ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ. ಆದರೆ ಕಡಿಮೆ ಮಕ್ಕಳಿರುವ 2-3 ಶಾಲೆಗಳನ್ನು ಸಂಯೋಜಿಸಿ ನಡೆಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಸುಮಾರು 48 ಸಾವಿರ ಸರ್ಕಾರಿ ಶಾಲೆಗಳಿವೆ. ಅದರಲ್ಲಿ 13 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ 25 ಮಕ್ಕಳಿಗಿಂತ ಕಡಿಮೆ ಮಕ್ಕಳಿದ್ದಾರೆ. ಈಗ ಒಂದೇ ಒಂದು ಮಗು ಇದ್ದರೂ ಶಾಲೆ ನಡೆಸುತ್ತಿಸುತ್ತಿದ್ದೇವೆ. ಹೀಗಾಗಿ ಶಾಲೆ ಮುಚ್ಚದೇ ಅವುಗಳನ್ನು ಮಾದರಿ ಶಾಲೆ ಮಾಡಲು ತೀರ್ಮಾನಿಸಲಾಗಿದೆ. 709 ಸಿಂಗಲ್ ವಿಲೇಜ್ ಗ್ರಾಮ ಪಂಚಾಯತಿಗಳು ಇವೆ. ಕಡಿಮೆ ಇರುವ ಮಕ್ಕಳ 2-3 ಶಾಲೆಗಳನ್ನ ಒಂದು ಮಾಡಿ ಮಾದರಿ ಶಾಲೆ ಮಾಡ್ತೀವಿ ಅಂದಿದ್ದಾರೆ. ಅಲ್ಲದೆ, ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ ಪ್ರಾರಂಭಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಈ ವರ್ಷದಲ್ಲೆ ನೈತಿಕ ಶಿಕ್ಷಣ ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಸಚಿವರು ಸರಕಾರಿ ಶಾಲೆಗಳ ವಿಚಾರವಾಗಿ ಹಲವು ಭರವಸೆಗಳನ್ನು ನೀಡಿದ್ದು ಅವುಗಳು ಹೀಗಿವೆ….
15 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಲಾಗಿದ್ದು, 2-3 ತಿಂಗಳ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣ ಆಗಲಿದೆ. ನೇಮಕಾತಿ ಶಿಕ್ಷಕರನ್ನ ಗ್ರಾಮೀಣ ಭಾಗಕ್ಕೆ ನಿಯೋಜನೆ ಮಾಡುತ್ತೇವೆ. ಈ ವರ್ಷ 7 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಇದೇ ತಿಂಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. 35 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಹಾಗೂ ಅತಿಥಿ ಶಿಕ್ಷಕರ ಗೌರವ ಧನ ಹೆಚ್ಚಳ ಮಾಡಲಾಗಿದೆ.
ಕೊರೊನಾ ಸಮಯದಲ್ಲಿ ಆದ ಶೈಕ್ಷಣಿಕ ಕೊರತೆ ನೀಗಿಸಲು ಕಲಿಕಾ ಚೇತರಿಕೆ ಜಾರಿ ಮಾಡಿದ್ದೇವೆ.
ಸರ್ಕಾರಿ ಶಾಲೆಗಳಲ್ಲೇ ಸ್ಪೋಕನ್ ಇಂಗ್ಲೀಷ್ ಪ್ರಾರಂಭ ಮಾಡಲಾಗ್ತಿದೆ. ಶಾಸಕರ ನಿಧಿಯಿಂದ ಸರ್ಕಾರಿ ಶಾಲೆಗಳಿಗೆ ವಾಹನ ಖರೀದಿಗೆ ಆದೇಶ. ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರನ್ನ `ಶಾಲಾ ಶಿಕ್ಷಣ ಇಲಾಖೆ’ ಅಂತ ಬದಲಾವಣೆ.
ಶಾಲೆಗಳ ಆಸ್ತಿ ರಕ್ಷಣೆಗೆ 3 ತಿಂಗಳು ಆಸ್ತಿ ರಕ್ಷಣೆ ಅಭಿಯಾನ ಪ್ರಾರಂಭ. ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ನೀಡಲು ತೀರ್ಮಾನ.
ಶೂ ಮತ್ತು ಸಾಕ್ಸ್ ಖರೀದಿಗೆ ಹಣ ಬಿಡುಗಡೆ. ಎಸ್‍ಡಿಎಂ ಗಳಿಗೆ ಶೂ, ಸಾಕ್ಸ್ ಖರೀದಿಗೆ ಅಧಿಕಾರ ನೀಡಲಾಗಿದೆ.
ಸಮವಸ್ತ್ರಕ್ಕೆ ಟೆಂಡರ್ ಕರೆಯಲಾಗಿದೆ. ಇನ್ನೊಂದು ತಿಂಗಳಲ್ಲಿ ಎರಡು ಜೊತೆ ಸಮವಸ್ತ್ರ ಮಕ್ಕಳಿಗೆ ಸಿಗಲಿದೆ.
ನನ್ನ ಶಾಲೆ ನನ್ನ ಕೊಡುಗೆ ಆಪ್ ಮೂಲಕ ದಾನಿಗಳ ಸಹಾಯದಿಂದ ಶಾಲೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ.
ಈಗಾಗಲೇ ಶೇ.97 ಪಠ್ಯ ಮಕ್ಕಳಿಗೆ ತಲುಪಿದೆ. ತಪ್ಪಾಗಿರುವ ಪಠ್ಯ ತಿದ್ದುಪಡಿಗೆ ಆದೇಶ ನೀಡಲಾಗಿದೆ.ವರ್ಗಾವಣೆ ನೀತಿ ಸರಳ ಮಾಡಿ ಪ್ರಕ್ರಿಯೆ ಮುಕ್ತಾಯ ಮಾಡಿದ್ದೇವೆ ಅಂತ ತಿಳಿಸಿದ್ರು. ಎನ್‍ಇಪಿ- ಅನುಷ್ಠಾನಕ್ಕೆ ಕ್ರಮ ಆಗುತ್ತಿದೆ. 1,2,3 ನೇ ತರಗತಿಯಲ್ಲಿ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ.