ಲಾಡ್ಜ್’ನಲ್ಲಿ ಪ್ರೇಮಿಗಳ ವಿಡಿಯೊ ಚಿತ್ರೀಕರಣ ಮಾಡಿ ಬ್ಲ್ಯಾಕ್‌ಮೇಲ್-ಮಹಿಳೆ ಸಹಿತ ಇಬ್ಬರ ಬಂಧನ
ಬೆಂಗಳೂರು ಜು.19: ಪ್ರೇಮಿಗಳ ಖಾಸಗಿ ಕ್ಷಣದ ವಿಡಿಯೊ ಚಿತ್ರೀಕರಿಸಿ 25 ಲಕ್ಷಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಬಾಗಲೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪ್ರೇಮಿಗಳು ನೀಡಿದ್ದ ದೂರು ಆಧರದ ಮೇಲೆ ಸಹಕಾರ ನಗರದ ನಿವಾಸಿ ಉಷಾ ಹಾಗೂ ದ್ವಾರಕನಗರದ ಸುರೇಶ್ ಬಾಬು ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ‘ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಯಲಹಂಕ ಬಳಿಯ ಹೋಟೆಲ್ ವೊಂದರ ಕೊಠಡಿಗೆ ಹಲವು ಬಾರಿ ಹೋಗಿ ಬಂದಿದ್ದರು. ಈ ವಿಷಯ ತಿಳಿದುಕೊಂಡಿದ್ದ ಆರೋಪಿಗಳು, ಪ್ರೇಮಿಗಳ ವಿಡಿಯೊ ಚಿತ್ರೀಕರಣ ಮಾಡಿ ಬ್ಲ್ಯಾಕ್‌ಮೇಲ್ ಮಾಡಲು ಸಂಚು ರೂಪಿಸಿದ್ದರು’.
ಅದರಂತೆ ‘ಪ್ರೇಮಿಗಳು ಇತ್ತೀಚೆಗೆ ಪುನಃ ಹೋಟೆಲ್ ಕೊಠಡಿಗೆ ಹೋಗಿ ಉಳಿದುಕೊಂಡಿದ್ದರು. ಈ ವೇಳೆ ಅದೇ ಕೊಠಡಿಯಲ್ಲೇ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಆರೋಪಿಗಳು, ಪ್ರೇಮಿಗಳ ಖಾಸಗಿ ಕ್ಷಣಗಳ ವಿಡಿಯೊ ಚಿತ್ರೀಕರಣ ಮಾಡಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’.
ಹಾಗೂ ‘ಕೆಲ ದಿನ ಬಿಟ್ಟು ಪ್ರೇಮಿಗಳ ವಾಟ್ಸ್ ಆ್ಯಪ್‌ಗೆ ವಿಡಿಯೊ ಕಳುಹಿಸಿದ್ದ ಆರೋಪಿ ಉಷಾ, ‘ನಿಮ್ಮಿಬ್ಬರ ಖಾಸಗಿ ವಿಡಿಯೊ ನನ್ನ ಬಳಿ ಇದೆ. 25 ಲಕ್ಷ ನೀಡಬೇಕು. ಇಲ್ಲದಿದ್ದರೆ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುತ್ತೇನೆ’ ಎಂದು ಬೆದರಿಸಿದ್ದರು. ಇದರಿಂದ ಗಾಬರಿಗೊಂಡ ಪ್ರೇಮಿಗಳು ಕುಟುಂಬದವರಿಗೆ ಮಾಹಿತಿ ನೀಡಿ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿದು ಬಂದಿದೆ.