ಪಿಎಂ ಕೇರ್ಸ್ ಫಂಡ್ ನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ಹಣ ವರ್ಗಾವಣೆ ಮಾಡುವಂತಿಲ್ಲ:ಸುಪ್ರೀಂ ಕೋರ್ಟ್
ನವದೆಹಲಿ: ಕೋವಿಡ್-19 ಸಂಕಷ್ಟದ ಪರಿಸ್ಥಿತಿ ನಿರ್ವಹಣೆಗೆ ಪಿಎಂ ಕೇರ್ಸ್ ಫಂಡ್ ನಡಿ ಸಂಗ್ರಹವಾದ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ(ಎನ್ ಡಿಆರ್ ಎಫ್)ಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಪಿಎಂ ಕೇರ್ಸ್ ಫಂಡ್ ನಡಿ ಸಂಗ್ರಹವಾದ ಹಣ ಸಂಪೂರ್ಣವಾಗಿ ಚಾರಿಟೇಬಲ್ ಟ್ರಸ್ಟ್ ನ ಹಣ, ಇದಕ್ಕೂ ಎನ್ ಡಿಆರ್ ಎಫ್ ಗೂ ಸಂಬಂಧವಿಲ್ಲ ಎಂದು ಹೇಳಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ಯಾರು ಬೇಕಾದರೂ ಯಾವಾಗ ಬೇಕಾದರೂ ಸ್ವ ಇಚ್ಛೆಯಿಂದ ದಾನ ಮಾಡಬಹುದು. ಆದರೆ ಪಿಎಂ ಕೇರ್ಸ್ ಫಂಡ್ ಕೇವಲ ಕೋವಿಡ್-19 ಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುದರ್ಶನ್ ರೆಡ್ಡಿ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ತೀರ್ಪು ನೀಡಿದೆ.
ಪಿಎಂ ಕೇರ್ಸ್ ಫಂಡ್ ನಡಿ ಸಂಗ್ರಹವಾದ ಹಣವನ್ನು ಎನ್ ಡಿಆರ್ ಎಫ್ ಗೆ ವರ್ಗಾಯಿಸಬೇಕೆಂದು ಸರ್ಕಾರೇತರ ಸಂಘಟನೆಯೊಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನ್ಯಾಯಾಲಯ ಇಂದು ಈ ಆದೇಶ ನೀಡಿದೆ. ಅರ್ಜಿಯಲ್ಲಿ ಪಿಎಂ ಕೇರ್ಸ್ ಫಂಡ್ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿತ್ತು.
ಸುಪ್ರೀಂ ಕೋರ್ಟ್ ನ ತೀರ್ಪು ಹೊರಬರುತ್ತಿದ್ದಂತೆ ಕೇಂದ್ರದ ಸಚಿವರುಗಳು ಅದನ್ನು ಸ್ವಾಗತಿಸಿದ್ದಾರೆ. ಪಿಎಂ ಕೇರ್ಸ್ ಫಂಡ್ ನ ಘನತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಸರ್ಕಾರ ಅದರಡಿ ಸಂಗ್ರಹವಾದ ಹಣವನ್ನು ಎನ್ ಡಿಆರ್ ಎಫ್ ಗೆ ವರ್ಗಾಯಿಸಬೇಕೆಂದು ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿರುವ ಮೂಲಕ ನ್ಯಾಯಾಲಯ ಸ್ಪಷ್ಟ ಸಂದೇಶ ನೀಡಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಈ ನಿಧಿಯ ಕಾನೂನು ಮೌಲ್ಯವನ್ನು ಪ್ರಶ್ನಿಸಿದ್ದು ಅದರ ಅಗತ್ಯತೆಯೇನು ಎಂದು ಸಹ ಕೇಳಿದ್ದರು. ಅದರ ಬದಲು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿದೆಯಲ್ಲವೇ ಎಂದು ಕೇಳಿದ್ದರು.
ಆದರೆ ಕೇಂದ್ರ ಸರ್ಕಾರ ಇದನ್ನು ಸಮರ್ಥಿಸಿಕೊಂಡು ಬಂದಿತ್ತು. ಇದು ಸ್ವಯಂಪ್ರೇರಿತ ನಿಧಿಯಾಗಿದ್ದು, ಇಚ್ಛೆಯುಳ್ಳವರು ಹಣದ ಸಹಾಯ ಮಾಡಬಹುದು ಎಂದು ಹೇಳಿತ್ತು.
ಕೋವಿಡ್-19 ಸಂಕಷ್ಟ ಬಂದ ಮೇಲೆ ಯಾವುದೇ ರೀತಿಯ ತುರ್ತು ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡಲು ಕಳೆದ ಮಾರ್ಚ್ 28ರಂದು ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಸಂದರ್ಭಗಳಲ್ಲಿ ಪರಿಹಾರ(ಪಿಎಂ ಕೇರ್ಸ್) ನಿಧಿಯನ್ನು ಸ್ಥಾಪಿಸಿತ್ತು. ಪ್ರಧಾನ ಮಂತ್ರಿಗಳು ಅದಕ್ಕೆ ಅಧ್ಯಕ್ಷರಾಗಿದ್ದು ರಕ್ಷಣೆ, ಗೃಹ ಮತ್ತು ಹಣಕಾಸು ಇಲಾಖೆ ಸಚಿವರು ಟ್ರಸ್ಟಿಗಳಾಗಿದ್ದಾರೆ.