ನೀರಿನ ಮೀಟರನ್ನು ಕಿತ್ತು ಸಮುದ್ರಕ್ಕೆ ಎಸೆಯಿರಿ- ಸಾಮಾನ್ಯ ಸಭೆಯಲ್ಲಿ ರಘುಪತಿ ಭಟ್ ಆಕ್ರೋಶ
ಉಡುಪಿ ಜು.20: ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಉಲ್ಬಣಗೊಂಡಿರುವುದರಿಂದ ಮತ್ತೆ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಉಡುಪಿ ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪಾರ್ಕಿಂಗ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಮಾತನಾಡಿದ ಅವರು
ಈ ಹಿಂದೆ ಉಡುಪಿ ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕಾಗಿ ಜಾರಿಯಲ್ಲಿದ್ದ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಕಾರಣಾಂತರದಿಂದ ರದ್ದು ಗೊಳಿಸಲಾಗಿತ್ತು. ಇದೀಗ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಆದಷ್ಟು ಬೇಗ ಸ್ಥಳ ಗುರುತು ಮಾಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ನಗರದ ಸಂಚಾರ ವ್ಯವಸ್ಥೆಯ ಕುರಿತು ಮಾತನಾಡಿದ ನಗರ ಸಂಚಾರ ಠಾಣೆಯ ಉಪ ನಿರೀಕ್ಷಕ ಅಬ್ದುಲ್ ಖಾದರ್ ಅವರು, ನಗರ ಸರ್ವಿಸ್ ಬಸ್ ನಿಲ್ದಾಣ, ಮೈತ್ರಿ ಕಾಂಪ್ಲೆಕ್ಸ್, ಜಟ್ಕಾ ಸ್ಟ್ಯಾಂಡ್‌ನ ಪಾರ್ಕಿಂಗ್ ಸ್ಥಳಗಳಲ್ಲಿ ಮಂಗಳೂರಿಗೆ ಕೆಲಸಕ್ಕೆ ಹೋಗುವ ಕೆಲವರು ಬೆಳಗ್ಗೆಯಿಂದ ಸಂಜೆಯವರೆಗೆ ತಮ್ಮ ವಾಹನ ನಿಲ್ಲಿಸಿ ಹೋಗುತ್ತಾರೆ. ಅಲ್ಲದೆ ಅಡ್ಡದಿಡ್ಡಿಯಾಗಿ ನಿಲ್ಲಿಸುವುದರಿಂದ ಹೆಚ್ಚು ವಾಹನಗಳನ್ನು ನಿಲ್ಲಿಸಲು ಸ್ಥಳವಾಕಾಶದ ಕೊರತೆ ಉಂಟಾಗುತ್ತದೆ. ಅದಕ್ಕಾಗಿ ಇಂತಹ ಸ್ಥಳಗಳಲ್ಲಿ ಪೇ ಪಾರ್ಕಿಂಗ್ ಮಾಡಿ, ಒಬ್ಬರನ್ನು ನಿಯೋಜಿಸಿದರೆ ಸಮಸ್ಯೆ ಪರಿಹರಿಸಬಹುದು. ಇದರಿಂದ ನಗರ ಸಭೆಗೂ ಆದಾಯ ಬರಲಿದೆ, ಕೆಲವರಿಗೆ ಉದ್ಯೋಗ ಕೊಡಿಸಿದಂತಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ರಘುಪತಿ ಭಟ್, ನಗರದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವುದು ಉತ್ತಮ. ಈ ನಿಟ್ಟಿನಲ್ಲಿ ಪೌರಾಯುಕ್ತರು ತಕ್ಷಣ ಯಾವ ಸ್ಥಳಗಳಲ್ಲಿ ಪೇ ಪಾರ್ಕಿಂಗ್ ಮಾಡಬಹುದು ಎಂಬುದಾಗಿ ಸಮೀಕ್ಷೆ ನಡೆಸಿ ನಗರಸಭೆಗೆ ಮಂಡಿಸಲಿ ಎಂದು ತಿಳಿಸಿದರು.
ಇದೇ ವೇಳೆ ನಗರದ ಏಳೆಂಟು ಕಡೆಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಝಿಬ್ರಾ ಕ್ರಾಸ್ ಗೊಂದಲಮಯವಾಗಿದ್ದು, ಇದನ್ನು ಸರಿಪಡಿಸಬೇಕು. ಫುಟ್ ಪಾತ್‌ಗಳಲ್ಲಿಯೇ ವ್ಯಾಪಾರ ನಡೆಸುವುದರಿಂದ ಪಾದಚಾರಿಗಳಿಗೆ ಸಮಸ್ಯೆ ಆಗುತ್ತಿದೆ. ಕೆ.ಎಂ.ರ್ಮಾಗದ ಲ್ಲಿನ ಡಿವೈಡರ್‌ನಲ್ಲಿ ಅಳವಡಿಸಿರುವ ಜಾಹೀರಾತು ಬೋರ್ಡ್ ಬೀಳುವ ಸ್ಥಿತಿಯಲ್ಲಿದ್ದು, ಅವುಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ನಗರ ಸಂಚಾರ ಠಾಣೆಯ ಉಪ ನಿರೀಕ್ಷಕ ಅಬ್ದುಲ್ ಖಾದರ್ ಅವರು ತಿಳಿಸಿದರು.
ಹಾಗೂ ಕಲ್ಸಂಕ ಸರ್ಕಲ್ ಉಡುಪಿ-ಅಂಬಾಗಿಲು ಹಾಗೂ ಅಂಬಾಗಿಲು- ಮಣಿಪಾಲ ಹೋಗುವ ರಸ್ತೆಯನ್ನು ಅಗಲ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬಹುದು. ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆ ಬ್ಲ್ಯಾಕ್ ಸ್ಪಾಟ್ ಎಂಬುದಾಗಿ ಗುರುತಿಸಲಾಗಿದೆ. ಕೆಲವು ಕಡೆ ಸರ್ವಿಸ್ ರಸ್ತೆಗಳಿಲ್ಲದೆ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.
ಸಭೆಯಲ್ಲಿ ಮಾತನಾಡಿದ ನಗರ ಸಭೆಯ ಸದಸ್ಯ ಪ್ರಭಾಕರ ಪೂಜಾರಿ ಅವರು, ಫೇವರ್ ಫಿನಿಶ್ ರಸ್ತೆಗಳು ಒಂದೇ ವರ್ಷಕ್ಕೆ ಕಿತ್ತು ಹೋಗಿದ್ದು, ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳ ಬೇಕು. ಹಾಗೂ ನಗರದಲ್ಲಿ ಇರುವ ಗಾಡಿ ಅಂಗಡಿಗಳನ್ನು ನಿರ್ಮೂಲನೆ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
ಕೆಲವು ಕಡೆ ಒಂದೇ ತಿಂಗಳಲ್ಲಿ ರಸ್ತೆ ಹಾಳಾಗಿವೆ. ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳ ಬೇಕು. ಕಾಮಗಾರಿಯ ಬಿಲ್ ಬಾಕಿ ಇಡಬೇಕು. ಇನ್ನು ಮುಂದೆ ಗುತ್ತಿಗೆದಾರರ ಬಿಲ್ ತಕ್ಷಣ ಪಾವತಿಸದೆ, ರಸ್ತೆ ಗುಣಮಟ್ಟ ನೋಡಲು ಒಂದು ವರ್ಷ ಕಾಯಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ರಮೇಶ್ ಕಾಂಚನ್ ಅವರು ಮಾತನಾಡಿ, ಕೆಲವು ಗುತ್ತಿಗೆದಾರರು ಶಾಸಕರ ಹೆಸರು ಹೇಳಿ ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಾರೆ. ಹಾಗಾಗಿ ಅಧಿಕಾರಿಗಳು ಈ ಬಗ್ಗೆ ಮಾತನಾಡಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನನ್ನ ಹೆಸರು ಹೇಳಿ ಬೆದರಿಸಿದರೆ ನನಗೆ ತಿಳಿಸಿ, ಅಂತಹ ಗುತ್ತಿಗೆದಾರರಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಸೂಚನೆ ನೀಡಿದರು.
ವಾರಾಹಿಯಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿ ಈಗಾಗಲೇ ಅಳವಡಿಸಲಾಗಿರುವ ನೀರಿನ ಮೀಟರ್‌ನಲ್ಲಿ 300ರೂ. ಬದಲು 1300ರೂ. ಬಿಲ್ ಬರುತ್ತಿದೆ ಎಂದು ಸದಸ್ಯ ಸುಂದರ್ ಕಲ್ಮಾಡಿ ಸಭೆ ಯಲ್ಲಿ ದೂರಿದರು.
ಇದಕ್ಕೆ ಸ್ಪಷ್ಟನೆ ಕೊಟ್ಟ ಯೋಜನೆ ಕಾಮಗಾರಿ ನಡೆಸುತ್ತಿರುವ ಕೆಯುಐಡಿ ಎಫ್‌ಸಿಯ ಅಧಿಕಾರಿಗಳು, ಇದಕ್ಕೆ ಕಾರಣ ಒತ್ತಡದಿಂದ ನೀರಿನ ಪೈಪಿನಲ್ಲಿ ಬರುತ್ತಿರುವ ಏರ್ (ಗಾಳಿ) ಕಾರಣವಾಗಿದೆ ಎಂದರು. ಇದರಿಂದ ಆಕ್ರೋಶಗೊಂಡ ಶಾಸಕರು ಹಾಗೂ ಸದಸ್ಯರು ಅಂತಹ ಮೀಟರ್ ಯಾವುದೇ ಕಾರಣಕ್ಕೂ ಅಳವಡಿಸಬಾರದು ಎಂದು ಹೇಳಿದರು.
ಈಗಾಗಲೇ ಕೆಲವು ಕಡೆ ಮೀಟರ್ ಅಳವಡಿಸಿ ಆಗಿದೆ. 24 ಗಂಟೆಗಳ ಕಾಲ ನೀರು ಪೂರೈಕೆ ಆಗುವಾಗ ಈ ಸಮಸ್ಯೆ ಬರುವುದಿಲ್ಲ. ಎಲ್ಲವನ್ನು ಸರಿ ಮಾಡಿ ಕೊಡುತ್ತೇವೆ ಎಂದು ಅಧಿಕಾರಿ ಸಮಜಾಯಿಸಿ ನೀಡಿದರು. ಇದರಿಂದ ಆಕ್ರೋಶಗೊಂಡ ಶಾಸಕರು, ಅಳವಡಿಸಿರುವ ಮೀಟರನ್ನು ಕಿತ್ತು ಸಮುದ್ರಕ್ಕೆ ಎಸೆಯಿರಿ. ಇಂತಹ ಮೀಟರ್ ಹಾಕಿದವರಿಗೆ ಬಿಲ್ ಪಾಸ್ ಮಾಡಿದರೆ ಪೌರಾಯುಕ್ತರ ವಿರುದ್ಧವೂ ಕ್ರಮಕ್ಕೆ ಸರಕಾರಕ್ಕೆ ಬರೆಯಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಪರ್ಕಳ ಹೆದ್ದಾರಿಯ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸುವಂತೆ ವಿಪಕ್ಷ ನಾಯಕ ರಮೇಶ್ ಕಾಂಚನ್ ಅವರು ಸಭೆಯಲ್ಲಿ ಒತ್ತಾಯಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಘುಪತಿ ಭಟ್ ಅವರು, ಇಲ್ಲಿನ ಕೆಳಪರ್ಕಳದಲ್ಲಿ ಏರಿಯಲ್ಲಿ ಹಾಳಾಗಿರುವ ರಸ್ತೆಗೆ ಮಣ್ಣು ಹಾಕಿದರೂ ನಿಲ್ಲುತ್ತಿಲ್ಲ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಭಾಗದಲ್ಲಿ ತಾತ್ಕಾಲಿಕವಾಗಿ ಕಾಂಕ್ರೀಟ್ ಕಾಮಗಾರಿ ನಡೆಸುವಂತೆ ಸೂಚನೆ ನೀಡಲಾಗಿದೆ. ಎರಡು ಮೂರು ದಿನಗಳಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಸಭೆಯಲ್ಲಿ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಹಾಜರಿದ್ದರು.