ಸಿದ್ದರಾಮಯ್ಯ, ಡಿಕೆಶಿಗೆ ಕೊಲೆ ಬೆದರಿಕೆ ಪ್ರಕರಣ: ನಿರೂಪಕ ಬಡಿಗೇರ್ ಹಾಗೂ ವೀರಣ್ಣ ವಿರುದ್ಧ ದಾಖಲೆ ಸಲ್ಲಿಕೆ
ಬೆಂಗಳೂರು, ಜು.15 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನಿರೂಪಕ ಅರುಣ್ ಬಡಿಗೇರ್ ಹಾಗೂ ದಾವಣಗೆರೆ ಮೂಲದ ವೀರಣ್ಣ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಗೆ ದಾಖಲೆ ಸಲ್ಲಿಕೆ ಮಾಡಲಾಗಿದೆ.
ಪ್ರಕರಣದ ದೂರುದಾರರಾದ ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದ್ ರಾಜ್ ಅವರು ಸಿಡಿ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸೂರ್ಯ ಮುಕುಂದ್ ರಾಜ್ ಅವರು, ಪ್ರಕರಣಕ್ಕೆ ಸಂಬಂಧಿಸಿ ಆ್ಯಂಕರ್ ಅರುಣ್ ಬಡಿಗೇರ್, ದಾವಣಗೆರೆ ಮೂಲದ ವೀರಣ್ಣ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ತದನಂತರ, ಯಶವಂತಪುರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ಅದರಂತೆ ದಾಖಲೆ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೂ ಕೋಮು ಭಾವನೆಯನ್ನು ಪ್ರಚೋದಿಸುವಂತೆ ಪಬ್ಲಿಕ್ ಟಿವಿ ವಾಹಿನಿಯಲ್ಲಿ ಸಾರ್ವಜನಿಕರ ಫೋನ್ ಇನ್ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ದಾವಣಗೆರೆಯಿಂದ ಕರೆ ಮಾಡಿದ ವೀರಣ್ಣ ಎಂಬಾತ ನೇರ ಪ್ರಸಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಗುಂಡಿಟ್ಟು ಸಾಯಿಸಿದರೆ, ಎಲ್ಲ ಸರಿಹೋಗುತ್ತದೆ ಎಂದು ಹತ್ಯೆ ಮಾಡಲು ಪ್ರಚೋದನೆ ನೀಡಿರುತ್ತಾನೆ. ಆತನ ಹೇಳಿಕೆಯನ್ನು ಕಾರ್ಯಕ್ರಮ ನಿರೂಪಕ ಅರುಣ್ ಬಡಿಗೇರ್ ತೀಕ್ಷ್ಣವಾಗಿ ಖಂಡಿಸುವುದನ್ನು ಬಿಟ್ಟು ಮತ್ತಷ್ಟು ಪ್ರಚೋದನಕಾರಿ ಮಾತನ್ನು ಹೇಳಲು ಪ್ರೋತ್ಸಾಹದಿಂದ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ