ವಿಶ್ವಕರ್ಮ ಸಮಾಜಕ್ಕೆ ಸರ್ಕಾರದಿಂದ ಅನ್ಯಾಯ: ಮಾರುತಿ ಬಡಿಗೇರ್
ಹೆಬ್ರಿ: (ಉಡುಪಿ ಟೈಮ್ಸ್ ವರದಿ) ಕಳೆದ 5 ತಿಂಗಳಿಂದ ರಾಜ್ಯದಲ್ಲಿ ವಿಶ್ವಕರ್ಮರು ಸಮಾಜದವರು ಕೆಲಸವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಲಾಕ್ ಡೌನ್ ಸಂದರ್ಭದಲ್ಲಿ ವಿಶ್ವಕರ್ಮರಿಗೆ ಪರಿಹಾರದ ಪ್ಯಾಕೇಜ್ ಕೊಡಲಿಲ್ಲ. ಸವಿತಾ ಸಮಾಜ, ಮಡಿವಾಳ ಸಮಾಜ ಮತ್ತು ಹೂಗಾರ್ ಸಮಾಜಕ್ಕೆ ಹಾಗೂ ನೇಕಾರರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ವಿಶ್ವಕರ್ಮ ಸಮಾಜಕ್ಕೆ ನಯಾಪೈಸೆ ನೀಡದೇ ಅನ್ಯಾಯ ಮಾಡಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಮಾಧ್ಯಮ ವಕ್ತಾರ ರಾಯಚೂರಿನ ಮಾರುತಿ ಬಡಿಗೇರ್ ಬೇಸರ ವ್ಯಕ್ತಪಡಿಸಿದರು.
ಅವರು ಭಾನುವಾರ ಹೆಬ್ರಿ ರಾಗಿಹಕ್ಲು ರಮೇಶ್ ಆಚಾರ್ಯರ ನೇತ್ರತ್ವದಲ್ಲಿ ನಡೆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ವಿಶ್ವಕರ್ಮ ಸಮಾಜದವರ ನೆನಪು ಆಗುತ್ತದೆ. ಕಳೆದ ಒಂದು ವರ್ಷದಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ನೇಮಕ ಮಾಡದೆ ರಾಜ್ಯ ಸರ್ಕಾರ ನಿರ್ಲಕ್ಷತನ ತೋರುತ್ತಿದೆ. ಆರ್ಯವೈಶ್ಯ ನಿಗಮ, ಬ್ರಾಹ್ಮಣ ಅಭಿವೃದ್ಧಿ ನಿಗಮ ಸಹಿತ ಇನ್ನಿತರ ನಿಗಮಗಳಿಗೆ ಅಧ್ಯಕ್ಷರನ್ನು ಮಾಡಿದ್ದು, ನಮಗೆ ಏಕೆ ಮಾಡಲಿಲ್ಲ ಎನ್ನುವುದು ನಮ್ಮ ಪ್ರಶ್ನೆ ಎಂದ ಮಾರುತಿ ಬಡಿಗೇರ್ 45 ಲಕ್ಷ ಜನ ವಿಶ್ವಕರ್ಮರಿದ್ದು ಶೇಕಡ 90ರಷ್ಟು ಮತ ಹಾಕಿದ್ದಾರೆ ಆದರೆ ಬಿಜೆಪಿ ಪಕ್ಷವು ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ದೂರಿದರು.
ಸರ್ಕಾರದ ಈ ದೋರಣೆ ಹೀಗೆ ಮುಂದುವರೆದರೆ ನಮ್ಮ ವಿಶ್ವಕರ್ಮ ಸಮಾಜದವರು ದಿನಗಳಲ್ಲಿ ತಕ್ಕಪಾಠ ಬಿಜೆಪಿಗೆ ಕಲಿಸುತ್ತೇವೆ. ಇದು ಸರ್ಕಾರಕ್ಕೆ ಎಚ್ಚರಿಕೆ ಎಂದು ಮಾರುತಿ ಬಡಿಗೇರ್ ಹೇಳಿದರು.ಯುವ ಘಟಕದ ಉಸ್ತುವಾರಿಯಾಗಿರುವ ಗುರು ವಿಶ್ವಕರ್ಮ ಮಾತನಾಡಿ ವಿಶ್ವಕರ್ಮ ಯುವಕರ ಮೂಲಕ ಮಹಾಸಭಾವನ್ನು ಬಲಿಷ್ಠವಾಗಿ ಕಟ್ಟಲು ಎಲ್ಲರೂ ಕ್ಯೆಜೋಡಿಸಿ, ನಿಮ್ಮ ನಾವು ಸದಾ ಇದ್ದೇವೆ ಎಂದು ಮನವಿ ಮಾಡಿದರು.
ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಹೆಬ್ರಿ ಗ್ರಾಮಮೋಕ್ತೇಸರ ಬಿ.ಎಂ.ಶೇಖರ ಆಚಾರ್ಯ ಮಾತನಾಡಿ ಎಲ್ಲರೂ ಒಂದಾಗಿ ಹೆಬ್ರಿಯಲ್ಲಿ ವಿಶ್ವಕರ್ಮ ಸಮುದಾಯವನ್ನು ಬಲಿಷ್ಠವಾಗಿ ಕಟ್ಟಬೇಕಿದೆ ಎಂದರು. ಹೆಬ್ರಿ ತಾಲ್ಲೂಕು ವಿಶ್ವಕರ್ಮ ಮಹಾಸಭಾದ ಸಂಘಟನೆಯ ರೂವಾರಿ ಸಮಾಜದ ಮುಖಂಡ ಎಚ್. ರಮೇಶ್ ಆಚಾರ್ಯ ಮಾತನಾಡಿ ಹೆಬ್ರಿ ತಾಲ್ಲೂಕಿನಲ್ಲಿ ಮಹಾಸಭಾವನ್ನು ಸಂಘಟಿಸಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ರಮೇಶ್ ಆಚಾರ್ಯ ಅವರನ್ನು ಮಹಾಸಭಾದ ವತಿಯಿಂದ ಗೌರವಿಸಲಾಯಿತು.
ಪಿಯುಸಿಯಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿ ಅಭಿಷೇಕ್ ಆರ್. ಆಚಾರ್ಯ, ರಾಯಚೂರಿನ ಮಾರುತಿ ಬಡಿಗೇರ್, ಗುರು ವಿಶ್ವಕರ್ಮ, ಗಾಯಕಿ ದೀಪಿಕಾ ಆಚಾರ್ಯ ಪರ್ಕಳ ಅವರನ್ನು ಗೌರವಿಸಲಾಯಿತು. ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪುರ ರತ್ನಾಕರ ಆಚಾರ್ಯ, ಸಮಾಜದ ಹಿರಿಯರು,ಯುವಕರು ಭಾಗವಹಿಸಿದ್ದರು.
ಹೆಬ್ರಿ ರಾಗಿಹಕ್ಲು ಅನುಷ್ ಆಚಾರ್ಯ ಸ್ವಾಗತಿಸಿ ಪತ್ರಕರ್ತ ಸುಕುಮಾರ್ ಮುನಿಯಾಲ್ ನಿರೂಪಿಸಿ ವಂದಿಸಿದರು.