ಯಶೋಧ ಆಟೋ ಚಾಲಕ, ಮಾಲಕರ ಸಂಘ: ಪ್ರತಿಭಾವಂತರಿಗೆ ಸನ್ಮಾನ
ಉಡುಪಿ : (ಉಡುಪಿ ಟೈಮ್ಸ್ ವರದಿ) ಯಶೋಧ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಸದಸ್ಯರ ಮಕ್ಕಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ, ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವದ ದಿನ ಪ್ರೋತ್ಸಾಹ ಧನದೊಂದಿಗೆ ಸನ್ಮಾನಿಸಲಾಯಿತು.
ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಶ್ರೀಕೃಷ್ಣ ಮಠದ ಪಾರ್ಕಿಂಗ್ ಬಳಿಯ ಮಥುರ ಚತ್ರ ಹೋಟೆಲ್ ವಠಾರದಲ್ಲಿ ಯಶೋಧ ಯೂನಿಯನ್ ಜಿಲ್ಲಾಧ್ಯಕ್ಷರಾದ, ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಧ್ವಜಾರೋಹಣಗೈದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣಮೂರ್ತಿ ಆಚಾರ್ಯ, ಇಂದು ಭಾರತ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿದೆ. ಹಿರಿಯರ ಭದ್ರ ಬುನಾದಿಯಿಂದ ನಾವು ವಿಶ್ವ ಮಟ್ಟಕ್ಕೆ ಬೆಳೆದಿದ್ದೇವೆ. ಆದರೆ ಸಣ್ಣ ವಿಷಯಗಳಿಗೆ ಧರ್ಮ ಧರ್ಮದ ನಡುವೆ ಸಂಘರ್ಷ ನಡೆಯುತ್ತಿರುವುದು ವಿಷಾದನೀಯ. ಕೋರೊನ ಮಹಾಮಾರಿಯಿಂದ ಮಧ್ಯಮ ಮತ್ತು ಕೆಳ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಇನ್ನಾದರೂ ನಾವು ಸಹೋದರರಂತೆ ಬಾಳೋಣ.
ಜಿಲ್ಲೆಯಲ್ಲಿ ಯಶೋಧ ಆಟೊ ಚಾಲಕ ಮತ್ತು ಮಾಲಕರ ಸಂಘ ದಿನೇ ದಿನೇ ಸದಸ್ಯರಲ್ಲಿ ಉತ್ಸಾಹವನ್ನು ತರುತ್ತಿದೆ. ಸದಸ್ಯರಿಗೆ ಮತ್ತು ಸದಸ್ಯರ ಮಕ್ಕಳಿಗೆ ಧೈರ್ಯ ತುಂಬುವುದರ ಜೊತೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಬಾರಿಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದೊಂದಿಗೆ ಗೌರವಿಸುತ್ತಿದ್ದೇವೆ. ಮಾತ್ರವಲ್ಲದೆ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ದಿನದಂದು 80%ಕ್ಕಿಂತ ಅಧಿಕ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಗೌರವಿಸಲಿದ್ದೇವೆ ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ 80%ಗಿಂತಲೂ ಅಧಿಕ ಅಂಕ ಪಡೆದ ಯಶೋಧ ಆಟೊ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರ ಮಕ್ಕಳಿಗೆ ಫಲಪುಷ್ಪ ಸ್ಮರಣಿಕೆ ಮತ್ತು ಗೌರವಧನ ನೀಡಿ ಜಿಲ್ಲಾಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಅಭಿನಂದಿಸಿದರು.
ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ್ ರಾವ್ ಧನ್ಯವಾದ ಸಮರ್ಪಿಸಿದರು. ಯೂನಿಯನ್ ಪ್ರಮುಖರಾದ ಕೋಶಾಧಿಕಾರಿ ಪ್ರವೀಣ್ ದೊಡ್ಡಣಗುಡ್ಡೆ, ತಾಲ್ಲೂಕು ಅಧ್ಯಕ್ಷ ಹರೀಶ್ ಅಮೀನ್, ಶ್ರೀನಿವಾಸ್ ಕಪ್ಪೆಟ್ಟು, ಅಬುಬಕ್ಕರ್, ಕೃಷ್ಣ ಪೆರಂಪಳ್ಳಿ, ಸುಧಾಕರ್ ಪರ್ಕಳ ಮತ್ತಿತರರು ಉಪಸ್ಥಿತರಿದ್ದರು.