ರಾಜ್ಯದಲ್ಲಿ ಜೂ.1 ರಿಂದ ಹೋಟೆಲ್ ಆರಂಭ?
ಬೆಂಗಳೂರು: ಕೆಲವು ಷರತ್ತಿಗೆ ಒಳಪಟ್ಟು ಜೂನ್ 1ರಿಂದ ರಾಜ್ಯದಲ್ಲಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ.
ಲಾಡ್ಜಿಂಗ್ ವ್ಯವಸ್ಥೆ ಹೊಂದಿರುವ ಹೋಟೆಲ್‌ಗಳು ಮತ್ತು ಇತರ ಹೋಟೆಲ್‌ಗಳಿಗೆ ಪ್ರತ್ಯೇಕ ನಿಯಮ ಗಳನ್ನು ರೂಪಿಸಲಾಗುವುದು. ಅವುಗಳನ್ನು ಪಾಲಿಸಿದರೆ ಮಾತ್ರ ಅವಕಾಶ ನೀಡಲಾಗುವುದು ಎಂಬ ಷರತ್ತು ವಿಧಿಸಿ ಅನುಮತಿ ಕೊಡುವ ಚಿಂತನೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಸುಮಾರು 50 ಸಾವಿರ ಹೋಟೆಲ್‌ಗಳಿದ್ದು, 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಇದನ್ನೇ ನೆಚ್ಚಿ ಬದುಕು ನಡೆಸುತ್ತಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಮಾಡಿ ಹೋಟೆಲ್ ಆರಂಭಕ್ಕೆ ಉದ್ಯಮಿಗಳೂ ಒತ್ತಡ ಹೇರಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ಗಮನಕ್ಕೂ ತರುವ ಪ್ರಯತ್ನ ನಡೆಸಿದ್ದಾರೆ.
ಮುಖ್ಯಮಂತ್ರಿ ಕಚೇರಿ ಮೂಲಗಳ ಪ್ರಕಾರ, ಜೂನ್ 1 ರಿಂದ ಹೋಟೆಲ್‌ಗಳಿಗೆ ಷರತ್ತುಗಳನ್ನು ವಿಧಿಸಿ ಕಾರ್ಯಾರಂಭ ನಡೆಸಲು ಅವಕಾಶ ನೀಡಬಹುದು. ಕೇಂದ್ರ ಸರ್ಕಾರದಿಂದ ಅಂತಹದ್ದೊಂದು ಸೂಚನೆ ಬರಬಹುದು. ವಿವಿಧ ರಾಜ್ಯಗಳಿಂದ ಜನರ ಓಡಾಟ ಆರಂಭವಾಗಿದೆ. ವಾಣಿಜ್ಯೋದ್ಯಮದ ಉದ್ದೇಶದಿಂದ ಅವರು ನಗರಗಳಲ್ಲಿ ತಂಗಬೇಕಾಗುತ್ತದೆ. ಅವರಿಗೆ ಲಾಡ್ಜ್ ಮತ್ತು ಹೋಟೆಲ್‌ಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ಅವಕಾಶ ನೀಡುವ ಸಾಧ್ಯತೆಯೇ ಹೆಚ್ಚು ಎಂದು ಮೂಲಗಳು ತಿಳಿಸಿವೆ.
ದೇವಸ್ಥಾನಗಳೂ ಆರಂಭ?: ದೇವಸ್ಥಾನಗಳ ಬಾಗಿಲು ತೆರೆಯುವುದಕ್ಕೂ ಸರ್ಕಾರ ಅವಕಾಶ ನೀಡುವ ಸಾಧ್ಯತೆಗಳಿವೆ.ಇಲ್ಲೂ ಕೂಡ ಷರತ್ತುಗಳನ್ನು ವಿಧಿಸಲಾಗುವುದು. ವ್ಯಕ್ತಿಗಳ ಮಧ್ಯೆ ಅಂತರ ಕಾಯ್ದುಕೊಳ್ಳುವುದು. ಮಾಸ್ಕ್ ಧರಿಸುವುದು, ಒಟ್ಟಿಗೆ ಸೇರಿ ಮಾಡುವಂತಹ ಪೂಜೆ ಮತ್ತು ಹೋಮಗಳಲ್ಲಿ ಇಂತಿಷ್ಟೇ ಜನರು ಇರಬೇಕು ಎಂಬ ಸಂಖ್ಯೆ ನಿಗದಿ ಮಾಡಬಹುದು ಎಂದು ಮೂಲಗಳು ಹೇಳಿವೆ.
Good luck. God bless you and your team.