ರಾಮರಾಜ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸಿ, ಅನ್ನದಾತನ ರಕ್ಷಿಸುವುದೇ ಸರ್ಕಾರದ ಪ್ರಥಮ ಆದ್ಯತೆ: ಯಡಿಯೂರಪ್ಪ
ಬೆಂಗಳೂರು: ನೇಗಿಲ ಯೋಗಿ ಅನ್ನದಾತನ ಹಿತರಕ್ಷಣೆಯೇ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು, 2020-21 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಅರ್ಹ ರೈತರಿಗೆ ಸಾಲ ದೊರೆಯಬೇಕೆಂಬ ನಿಟ್ಟಿನಲ್ಲಿ 14 .50 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿಯನ್ನು ಹಾಕಿಕೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಾಣೆಕ್ ಷಾ ಪರೇಡ್ ನಲ್ಲಿ ಜರುಗಿದ 74 ನೇ ಸ್ವಾತಂತ್ರ್ಯ ದಿನಾಚಾರಣೆಯ ಶುಭ ಸಂದರ್ಭದಲ್ಲಿ ದ್ವಜಾರೋಹಣ ಮಾಡಿ ಅವರು ಮಾತನಾಡಿದರು. ಕೃಷಿ ಆರ್ಥಿಕತೆಯ ಬೆನ್ನೆಲುಬಾಗಿರುವ ಸಹಕಾರ ವಲಯದಲ್ಲಿ ಸರ್ಕಾರ ಮಹತ್ತರ ಬದಲಾವಣೆಗಳನ್ನು ತಂದಿದೆ. ರೈತರು ತಾವು ಬೆಳೆದ ಬೆಳೆಗಳನ್ನು ತಮ್ಮ ಇಚ್ಚೆಯಂತೆ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನೀತಿಯಲ್ಲಿ ಮಾರ್ಪಾಡು ತರಲಾಗಿದೆ ಎಂದರು.
ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದೊಂದಿಗೆ ‘ಕಲ್ಯಾಣ ರಾಜ್ಯ’ವನ್ನು ಕಟ್ಟುವುದೇ ನಮ್ಮ ಗುರಿ.ಕೋವಿಡ್-19 ಎಂಬ ಮಹಾ ಪಿಡುಗಿನ ವಿರುದ್ಧ ದ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿ ರಾಜ ಧರ್ಮ ಪಾಲನೆಗೆ ನಾವು ಮುಂದಾಗಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಜನ ಸೇವೆಯೇ ಜನಾರ್ಧನ ಸೇವೆ, ಜನಹಿತ ವನ್ನು ಮನದಲ್ಲಿರಿಸಿ ಜನಪರ ತೀರ್ಮಾನಗಳನ್ನು ತೆಗೆದುಕೊಂಡಿ ದ್ದೇವೆ.ಈ ಎಲ್ಲಾ ತೀರ್ಮಾನಗಳಿಗೂ ನನ್ನ ರಾಜ್ಯದ ಜನರು ಸಂಪೂರ್ಣ ಬೆಂಬಲ ನೀಡಿ ಸಹಕರಿಸಿದ್ದೀರಿ.ಅದಕ್ಕಾಗಿ ನಾನು ತಮಗೆ ಅಭಾರಿಯಾಗಿದ್ದೇನೆ ಎಂದರು.
ಕೋವಿಡ್-19 ಎಂಬುದು ಜಾಗತಿಕ ಪಿಡುಗಾಗಿದ್ದು ಎಲ್ಲಾ ಕ್ಷೇತ್ರಗಳನ್ನು ಬಾಧಿಸಿದೆ.ಲಾಕ್‍ಡೌನ್ ಕಾಲದಲ್ಲಿ ಮಂದಗತಿಯ ಜನ ಜೀವನ ಇಂದು ಚೇತರಿಸಿ ಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಬಾಧಿತನಾಗಿ ಇದೀಗ ವೈದ್ಯಕೀಯ ಶುಶ್ರೂಷೆಯಿಂದ ಗುಣಮುಖ ನಾಗಿರುತ್ತೇನೆ.ಜನರು ಸೋಂಕಿನ ಬಗ್ಗೆ ಆತಂಕ, ಭಯಭೀತರಾಗುವ ಅಗತ್ಯವಿಲ್ಲ.ಜಾಗರೂಕತೆಯಿಂದ ಜೀವನ ನಡೆಸಬೇಕು ಎಂದು ಅವರು ಕರೆ ನೀಡಿದರು.
ನೇಗಿಲಯೋಗಿ ಅನ್ನದಾತನ ರಕ್ಷಣೆ ನಮ್ಮ ಸರ್ಕಾರದ ಮೊದಲ ಆದ್ಯತೆ. ರೈತರಿಗೆ ಕಿಸಾನ್ ಸಮ್ಮಾನ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುವುದು. 10 ಲಕ್ಷ ರೈತರಿಗೆ 6,500 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ. 2020-21ನೇ ಸಾಲಿನಲ್ಲಿ ರಾಜ್ಯದ ಎಲ್ಲ ಅರ್ಹ ರೈತರಿಗೆ ಸಾಲ ನೀಡಲಾಗುವುದು. 5.82 ಲಕ್ಷ ರೈತರಿಗೆ ಸರ್ಕಾರದಿಂದ ನೆರವು ನೀಡಲಾಗುವುದು. ಕೊರೋನಾದಿಂದ ಮೃತಪಟ್ಟಿರುವವರಿಗೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಶಿವಮೊಗ್ಗ, ಕಾರವಾರ ಮತ್ತು ವಿಜಯಪುರದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಬ್ ಸರ್ಬನ್ ರೈಲ್ವೆ ಯೋಜನೆಗೆ ವೇಗ ನೀಡಲಾಗಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆ 2ನೇ ಹಂತಕ್ಕೆ 30,695 ಕೋಟಿ ರೂ. ಮೀಸಲಿಡಲಾಗಿದೆ. 2024ರ ಜೂನ್ ವೇಳೆಗೆ 2ನೇ ಹಂತದ ಮೆಟ್ರೋ ರೈಲು ಯೋಜನೆ ಪೂರ್ಣಗೊಳ್ಳಲಿದೆ. ಸರ್ಕಾರದ ಎಲ್ಲ ಪ್ರಯತ್ನಗಳಿಗೆ ಪ್ರಧಾನಿ ಮೋದಿ ಅವರ ಸಹಕಾರವಿದೆ ಎಂದು ಸಿಎಂ ಹೇಳಿದ್ದಾರೆ.