ಬೆಳ್ಳಂಬೆಳಗ್ಗೆ ಶಾಸಕ ಜಮೀರ್’ಗೆ ಎಸಿಬಿ ಶಾಕ್: ಮನೆ, ಕಚೇರಿ ಪರಿಶೀಲನೆ- ಬೆಂಬಲಿಗರ ಪ್ರತಿಭಟನೆ

ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ  ಶಾಸಕ ಜಮೀರ್ ಅಹಮದ್ ಖಾನ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರದ ದಳ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಜಮೀರ್ ಅಹ್ಮದ್ ಖಾನ್ ಅವರಿಗೆ ಸೇರಿದ ರೈಲ್ವೆ ಕಂಟೋನ್‌ಮೆಂಟ್‌ ಬಳಿಯಿರುವ ಮನೆ, ಕಲಾಸಿಪಾಳ್ಯದಲ್ಲಿ ಇರುವ ನ್ಯಾಷನಲ್ ಟ್ರಾವೆಲ್ಸ್‌ ಕಚೇರಿ, ಸಿಲ್ವರ್‌ ಓಕ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಫ್ಲಾಟ್‌, ಸದಾಶಿವನಗರದಲ್ಲಿರುವ ಗೆಸ್ಟ್‌ಹೌಸ್‌ ಮತ್ತು ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್‌ ಕಚೇರಿ ಮೇಲೆ 40 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆಯನ್ನು ಆರಂಭಿಸಿದ್ದಾರೆ.

ಜಾರಿ ನಿರ್ದೇಶನಾಲಯದ ನಿರ್ದೇಶನದಂತೆ ಅಕ್ರಮ ಆಸ್ತಿಗಳಿಕೆ‌ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಶಾಸಕ ಜಮೀರ್​ ಮನೆ, ಕಚೇರಿ ಸೇರಿ 5 ಕಡೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ಮುಂದುವರೆಸಿದ್ದಾರೆ. 5 ವಾಹನಗಳಲ್ಲಿ ಒಬ್ಬರು ಡಿವೈಎಸ್​ಪಿ, ಇಬ್ಬರು ಇನ್ಸ್​ಪೆಕ್ಟರ್​​ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಲಭ್ಯವಾದ ಕಡತಗಳ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಶಾಸಕ ಜಮೀರ್ ಅಹ್ಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಎದುರು ಸ್ಥಳೀಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜಾರಿ ನಿರ್ದೇಶನಾಲಯದ ವರದಿಯ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹದ ದಳದ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್‌ ಖಾನ್ ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿಕೊಂಡಿದ್ದು, ಜಮೀರ್ ಖಾನ್ ಅವರಿಗೆ ಸೇರಿದ ಐದು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಾಸಕ ಜಮೀರ್​ ನಿವಾಸಕ್ಕೆ ಎಸಿಬಿ ಎಸ್​ಪಿ ಹರೀಶ್​ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಬಳಿಯ ನಿವಾಸಕ್ಕೆ ಯಲಹಂಕ ಉಪವಿಭಾಗ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇನ್ನೊಂದೆಡೆ ಜಮೀರ್ ಕಂಟೋನ್ಮೆಂಟ್ ನಿವಾಸಕ್ಕೆ ಮತ್ತೋರ್ವ ಎಸಿಬಿ ಎಸ್​ಪಿ ಯತೀಶ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ದಾಳಿಯಾಗುತ್ತಿದ್ದಂತೆ ಜಮೀರ್ ನಿವಾಸದ ಬಳಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ನಿವಾಸದ ಬಳಿ ಅಹಿತಕರ ಘಟನೆ ನಡೆಯದಂತೆ ಕೆಎಸ್​​ಆರ್​ಪಿ ತುಕಡಿಯನ್ನು ಸ್ಥಳಕ್ಕೆ ಕರೆದು ಭದ್ರತೆಗೆ ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!