ಕೋಣದ ಯಜಮಾನರಿಂದ, ಅಭಿಮಾನಿಗಳಿಂದ ದೇಣಿಗೆ ಸ್ವೀಕರಿಸುವ, ಜೂಜುಕೋರರಿಗೆ ಸಹಕಾರ ನೀಡುವವರ ಕೈಯಲ್ಲಿ ಕಂಬಳ ಸಮಿತಿ- ಲೋಕೆಶ್ ಶೆಟ್ಟಿ ಮುಚ್ಚೂರು

ಉಡುಪಿ ಜು.4 (ಉಡುಪಿ ಟೈಮ್ಸ್ ವರದಿ): ರಾಜ್ಯ ಕಂಬಳ ಸಮಿತಿ ರಚನೆಗೆ ಉಡುಪಿ ಜಿಲ್ಲಾ ಸಾಂಪ್ರದಾಯ ಬದ್ದ ಕಂಬಳ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಉಡುಪಿ. ದ.ಕ ಜಿಲ್ಲಾ ಕಂಬಳ ಸಮಿತಿ ಅಜೀವ ಸದಸ್ಯ ಲೋಕೆಶ್ ಶೆಟ್ಟಿ ಮುಚ್ಚೂರು ಕಲ್ಕುಡೆ ಅವರು, ಉಡುಪಿ, ದ.ಕ. ಜಿಲ್ಲೆಗಳಲ್ಲಿನ ಹಿರಿಯರು ಸೇರಿಕೊಂಡು 1999-2000 ಇಸವಿಯಲ್ಲಿ “ಜಿಲ್ಲಾ ಕಂಬಳ ಸಮಿತಿಯನ್ನು ಸ್ಥಾಪನೆ ಮಾಡಿದ್ದರು ಹಾಗೂ ಈ ಸಮಿತಿಗೆ ಅದರದ್ದೇ ಆದ ಕಟ್ಟು ಪಾಡುಗಳನ್ನು ನಿಯಮಗಳನ್ನು ರೂಪಿಸಿದ್ದರು. ಆದರೆ 2021-2022 ರಲ್ಲಿ ಈ ಸಮಿತಿಯ ನಿಯಮಗಳನ್ನು ಗಾಳಿಗೆ ತೂರಿ ಒಂದಿಷ್ಟು ಜನರು ಸೇರಿಕೊಂಡು ಹೊಸ ಸಮಿತಿಯನ್ನು ರಚನೆ ಮಾಡಿದ್ದರು.

ಮಾತ್ರವಲ್ಲದೆ ದ.ಕ ಜಿಲ್ಲಾ ಸಮಿತಿಯ 90 ಅಜೀವ ಸದಸ್ಯರಿದ್ದು, 35 ಸಾಮಾನ್ಯ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದು ಕೊಳ್ಳದೇ ಯಾವುದೇ ಸಭೆ ಕರೆಯದೇ ಮತ್ತೊಂದು ಸಮಿತಿ ರಚನೆ ಮಾಡಿಕೊಂಡಿದ್ದರು. ಇದೀಗ ಈ ಬಗ್ಗೆ ಪ್ರಶ್ನಿಸಿ ಸಂಪ್ರದಾಯ ಬದ್ದ ಕಂಬಳ ಸಮಿತಿ ವತಿಯಿಂದ ಹೈಕೋರ್ಟ್ ನಲ್ಲಿ ದೂರು ದಾಖಲಿಸಲಾಗಿದೆ. ನೂತನ ಸಮಿತಿ ರಚನೆಗೆ ತಡೆ ನೀಡಿ ನ್ಯಾಯಾಲಯವು 2021 ರ ಡಿ.18 ರಂದು ಆದೇಶ ನೀಡಿತ್ತು. ಈ ನಡುವೆ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಶೆಟ್ಟಿ ಇತರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಭೆಯನ್ನು ಕರೆದಿರುವ ಬಗ್ಗೆ ಮಾಹಿತಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಈ ಸಭೆಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

ಇನ್ನು ರಾಜ್ಯ ಸರಕಾರವು ರಾಜ್ಯ ಕಂಬಳ ಸಮಿತಿ ರಚನೆಗೆ ಸೂಚನೆ ನೀಡಿದ್ದು, ಈ ಸೂಚನೆಗೆ 2020-21 ರ ಸಮಿತಿ ಯಲ್ಲಿ ಗೌರವ ಸಲಹೆಗಾರ ಮತ್ತು ವಕ್ತಾರರಾಗಿದ್ದ ಕೆ.ಗುಣಪಾಲ ಕಡಂಬ ಎಂಬವರು ತಮ್ಮನ್ನು ಸಮಿತಿಯ ಅಧ್ಯಕ್ಷರು ಎಂದು ಸೂಚಿಸಿ ತಮ್ಮಿಷ್ಟದಂತೆ ಇತರ19 ಮಂದಿ ಹೆಸರನ್ನು ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿರುತ್ತಾರೆ. ಆದ್ದರಿಂದ ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ ಸಮಿತಿಗೆ ಅಂಗೀಕರಿಸದೆ ಅನುಮತಿ ನೀಡದೆ ನ್ಯಾಯಯುತವಾಗಿ ಕಂಬಳ ಸಮಿತಿಯ ಅಜೀವ ಸದಸ್ಯರ, ವ್ಯವಸ್ಥಾಪಕರ, ಕೋಣಗಳ ಯಜಮಾನರುಗಳು ಹಾಗೂ ಕಂಬಳ ಅಭಿಮಾನಿಗಳ ಸಭೆಯನ್ನು ಕರೆದು ಸರಕಾರದ ನೇತೃತ್ವದಲ್ಲಿ ಈ ಸಮಿತಿ ರಚನೆಯಾಗಬೇಕು ಹಾಗೂ ಕೆ. ಗುಣಪಾಲ ಕಡಂಬ, ಶ್ರೀನಿವಾಸ ಗೌಡ ರತ್ನಾಕರ್ ಹಾಗೂ ನಿಕಟಪೂರ್ವ ಅಧ್ಯಕ್ಷರಾಗಿರುವ ಪಿ.ಆರ್. ಶೆಟ್ಟಿ,ರೋಹಿತ್ ಹೆಗ್ಡೆ ಇವರನ್ನು ವಿಚಾರಣೆ ನಡೆಸಿ ಕಂಬಳಕ್ಕೆ ಹಾಗೂ ಕಂಬಳ ಅಭಿಮಾನಿಗಳಿಗೆ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಮಾತ್ರವಲ್ಲದೆ ಕಂಬಳದಿಂದ ದೂರ ಉಳಿದುಕೊಂಡ ವ್ಯಕ್ತಿ ಕಂಬಳ ನಿರ್ವಹಣೆ ಮತ್ತು ಸಂರಕ್ಷಣೆ’ ಎಂಬ ಅಕಾಡೆಮಿಯನ್ನು ಮಾಡಿ ಕೋಣದ ಯಜಮಾನರುಗಳಿಂದ ಹಾಗೂ ಕಂಬಳ ಅಭಿಮಾನಿಗಳಿಂದ ದೇಣಿಗೆಗಳನ್ನು ಸ್ವೀಕರಿಸಿ ಕರ್ನಾಟಕ ಸರಕಾರದಿಂದ ಸಹಾಯ ಧನ ಪಡೆದು ಯಾವುದೇ ಲೆಕ್ಕ ಪತ್ರವನ್ನು ಸರ್ಕಾರಕ್ಕೆ ಪ್ರಕಟಿಸದೇ ಸರಕಾರವನ್ನು ವಂಚಿಸಿರುತ್ತಾರೆ ಎಂದು ಆರೋಪಿಸಿದ್ದಾರೆ. ಇದರೊಂದಿಗೆ ಇವರ ಅಕಾಡೆಮಿಯಲ್ಲಿ ತರಬೇತಿ ಪಡೆದಿರುತ್ತಾನೆ ಎಂಬ ಒಂದೇ ಕಾರಣಕ್ಕೆ ತನ್ನ ಅಕಾಡೆಮಿಗೆ ಇನ್ನಷ್ಟು ಸಹಾಯ ಧನ ಬರಬೇಕು ಎಂಬ ದುರಾಸೆಯಿಂದ ಶ್ರೀನಿವಾಸ ಗೌಡ ಎಂಬ ಕಂಬಳ ಓಟಗಾರನಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ.

ಕಂಬಳ ಸಮಿತಿಯ ಯಾವುದೇ ಒಂದು ಪ್ರಮಾಣ ಪತ್ರ ಇರದೇ, ಸರಕಾರದ ಯಾವುದೇ ಪರವಾನಿಗೆ ಪಡೆಯದೇ ಕೋಣದ ಓಟದ ಸಮಯವನ್ನು ನಿಗದಿ ಪಡಿಸುವ ರತ್ನಾಕರ ಎಂಬ ವ್ಯಕ್ತಿಗೆ ನಿರ್ದೆಶನವನ್ನು ನೀಡಿ ಶ್ರೀನಿವಾಸ ಗೌಡ ಎಂಬ ಓಟಗಾರನ ಹೆಸರಿನಲ್ಲಿ ಕೆಲವು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುತ್ತಾರೆ. ಶ್ರೀನಿವಾಸ ಗೌಡ ಅವರ ದಾಖಲೆಗಳು ಸುಳ್ಳು ಸೃಷ್ಟಿಯಾಗಿದ್ದು, ಇದು ಕಂಬಳಕ್ಕೆ ಅಪಹಾಸ್ಯ ಮಾಡುವ ದಾಖಲೆಯಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ ಸರಕಾರವನ್ನು ವಂಚಿಸಿ ಸರಕಾರಕ್ಕೆ ಸುಳ್ಳು ದಾಖಲೆಯನ್ನು ನೀಡಿ ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯಿಂದ ಸಹಾಯ ಧನವನ್ನು ಪಡೆದಿರುತ್ತಾರೆ.

ಹಾಗೂ ಯುವ ಓಟಗಾರರ ಮನೋಸ್ಥೈರ್ಯವನ್ನು ಹಾಳುಗೈದಿರುತ್ತಾರೆ. ಒಂಟಿ ಕೆರೆ ಕಂಬಳದಲ್ಲಿ ವಿಜೇತರನ್ನು ಆಯ್ಕೆ ಮಾಡಲು ಓಟದ ಸಮಯದಲ್ಲಿ ಸೆಕೆಂಡ್ ನ್ನು ಬಳಸುತ್ತೇವೆ ಆದರೆ ಜೋಡುಕೆರೆ ಕಂಬಳಕ್ಕೆ ಯಾವುದೇ ಸೆಕುಂಡ್ ನ ಅಗತ್ಯ ಇಲ್ಲ, ಚೀಟಿ ಆಧಾರದಲ್ಲಿ ಪ್ರತಿಸ್ಪರ್ಧಿಯೊಂದಿಗೆ ಕಂಬಳದಲ್ಲಿ ಭಾಗವಹಿಸಬೇಕಾಗುತ್ತದೆ. ಆದರೆ ಈ ದಾಖಲೆಗಳು ಕಂಬಳದಲ್ಲಿ ಯಥೇಚ್ಚಾಗಿ ನಡೆಯುವಂತ ಜೂಜುಕೋರರಿಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಸೆಕೆಂಡು ದಾಖಲೆಗಳು.

ಇದೊಂದು ಸಂಘಟಿತವಾದ ಕಾರ್ಯಾಚರಣೆಯಾಗಿದ್ದು, ಇದು ಹೀಗೆ ಮುಂದುವರೆದರೆ ಕಂಬಳವನ್ನು ಅಪಹಾಸ್ಯ ಮಾಡುವ ಸ್ಥಿತಿ ಬರಬಹುದು ಎಂದರು. ಹಾಗೂ ಶ್ರೀನಿವಾಸ ಗೌಡ ಅವರ ದಾಖಲೆಗಳ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು. ಈ ದಾಖಲೆಗಳ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸಂದರ್ಭದಲ್ಲಿ ಕಂಬಳ ಸಮಿತಿಯ ಜಿಲ್ಲಾಧ್ಯಕ್ಷ ಸುಧಾಕರ ಹೆಗ್ಡೆ, ಬೈಂದೂರು ಕುಂದಪುರ ವಲಯ ಸಮಿತಿ ಅಧ್ಯಕ್ಷ ವೆಂಕಟ್ ಪೂಜಾರಿ, ಕಂಬಳ ಅಭಿಮಾನಿ ಪ್ರಮೋದ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!