ಉಡುಪಿ: ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿ- ಕಾಂಗ್ರೆಸ್
ಉಡುಪಿ: (ಉಡುಪಿ ಟೈಮ್ಸ್ ವರದಿ) ಕೋವಿಡ್19 ನೆಪ ಹೇಳಿ ರಾಜ್ಯ ಸರಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ಸಂಪೂರ್ಣ ನಿರ್ಬಂಧಿಸಿರುವುದು ಸಮಂಜಸವಲ್ಲ. ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು ಎನ್ನುವ ಈ ಹಿಂದಿನ ಸರಕಾರದ ನಿರ್ಧಾರಕ್ಕೆ ಧಾರ್ಮಿಕ ಬಂಧುಗಳು ಸಹಮತ ವ್ಯಕ್ತಪಡಿಸಿರುವಾಗ ಈಗಾಗಲೇ ಸಾರ್ವಜನಿಕ ಗಣೇಶೋತ್ಸವವನ್ನು ನಡೆಸಲು ಪೂರ್ವ ತಯಾರಿ ನಡೆಸಿರುವ ಸಂಸ್ಥೆಗಳ ಪಾಡೇನು ? ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿ ತಮ್ಮ ತಮ್ಮ ಮನೆಗಳಲ್ಲಿಯೇ ಗಣೇಶ ಮೂರ್ತಿಯನ್ನು ಇಟ್ಟು ಧಾರ್ಮಿಕ ಆಚರಣೆಗಳನ್ನು ಮಾಡಬೇಕು ಎನ್ನುವ ಸರಕಾರದ ಮಾರ್ಗಸೂಚಿ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಘಾಸಿಯಾದಂತೆ.
ರಾಜ್ಯದಲ್ಲಿ ಈಗಾಗಲೇ ಸರಕಾರದ ಮಾರ್ಗಸೂಚಿಯಂತೆ ಸಣ್ಣಪುಟ್ಟ ಸಮಾರಂಭಗಳು ನಡೆಯುತ್ತಿದೆ. ಬಾರ್, ಜಿಮ್, ದೇವಸ್ಥಾನಗಳು, ವ್ಯಾಪಾರ ಕೇಂದ್ರಗಳು ಕಾರ್ಯಚರಿಸುತ್ತಿವೆ. ಸಚಿವರುಗಳು, ಅಧಿಕಾರಿಗಳ ಜನ ಸಂಪರ್ಕ ಸಭೆಗಳು ನಿರಾತಂಕವಾಗಿ ನಡೆಯುತ್ತಿದೆ. ಹೀಗಿರುವಾಗ ಸರಕಾರ ಧಾರ್ಮಿಕ ಭಾವನೆಗೆ ಧಕ್ಕೆ ತರದಂತೆ ಸರಕಾರದ ಮಾರ್ಗಸೂಚಿಯಂತೆ ಗಣೇಶೋತ್ಸವ ಆಚರಿಸಲು ಅನುಮತಿ ನೀಡಬೇಕು. ಜಾತಿ, ಮತ ಬೇಧಬಾವವಿಲ್ಲದೆ ಎಲ್ಲಾ ವರ್ಗದವರೂ ಪಾಲ್ಗೊಳ್ಳುವ ಈ ಹಬ್ಬವನ್ನು ಸಂಪೂರ್ಣವಾಗಿ ನಿರ್ಭಂಧಿಸಿರುವುದನ್ನು ಸರಕಾರ ಪುರ್ನವಿಮರ್ಶಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಸರಕಾರವನ್ನು ಆಗ್ರಹಿಸಿದ್ದಾರೆ.