ಸೋನಿಯಾ, ರಾಹುಲ್‌ರನ್ನು ಲಾಕ್‌ಡೌನ್ ಮುಗಿವವರೆಗೂ ಕ್ವಾರಂಟೈನ್ ಮಾಡಬೇಕು: ಪರ್ವೇಶ್
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಲಾಕ್‌ಡೌನ್ ಕೊನೆಗೊಳ್ಳುವವರೆಗೂ ಕ್ವಾರಂಟೈನ್ ಮಾಡಬೇಕು ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ. ಈಗಾಗಲೇ ಕೊರೊನಾದಿಂದಾಗಿ ಭೀತಿಗೊಳಗಾಗಿರುವ ಜನರಲ್ಲಿ ಅವರು ಮತ್ತಷ್ಟು ದಿಗಿಲು ಹುಟ್ಟಿಸುತ್ತಿದ್ದಾರೆ. ಇದನ್ನು ತಡೆಯಲು ಗಾಂಧಿ ಕುಟುಂಬದವರನ್ನು ಕ್ವಾರಂಟೈನ್‌ನಲ್ಲಿ ಇಡಬೇಕು ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸಹ ಇದಕ್ಕೆ ಕಟುವಾದ ತಿರುಗೇಟು ನೀಡಿದೆ. ವೈಯಕ್ತಿಕ ಟೀಕೆ ಮಾಡುವ ಬದಲು ಯೋಜಿತವಲ್ಲದ ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರಿಗೆ ಆಗಿರುವ ತೊಂದರೆಗಳ ಬಗ್ಗೆ ಬಿಜೆಪಿ ಉತ್ತರಿಸಲಿ ಎಂದು ಕಾಂಗ್ರೆಸ್ ಹೇಳಿದೆ.
ಕೊರೊನಾದಿಂದಾಗಿ ಜನರು ಮೊದಲೇ ಭೀತಿಗೊಳಗಾಗಿದ್ದಾರೆ. ಮಾರ್ಚ್ 25ರಂದು ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪ್ರತಿಯೊಂದರಲ್ಲೂ ತಪ್ಪುಗಳನ್ನೇ ಹುಡುಕುತ್ತಿದ್ದಾರೆ. ಜನರಲ್ಲಿ ಮತ್ತಷ್ಟು ದಿಗಿಲು ಹುಟ್ಟಿಸುತ್ತಿದ್ದಾರೆ ಎಂದು ವರ್ಮಾ ದೂರಿದ್ದಾರೆ.
‘ಈಗ ಲಾಕ್‌ಡೌನ್ ವಿಫಲವಾಗಿದೆ ಎನ್ನುವ ಮೂಲಕ ಅವರು ಜನರಲ್ಲಿ ಮತ್ತಷ್ಟು ಭೀತಿ ಮೂಡಿಸುತ್ತಿದ್ದಾರೆ’ ಎಂದೂ ವರ್ಮಾ ಆರೋಪಿಸಿದ್ದಾರೆ.
ವದಂತಿ ಹಬ್ಬಿಸುವ ವಿಚಾರವಾಗಿ ಇತ್ತೀಚೆಗಷ್ಟೇ ಪರ್ವೇಶ್ ವರ್ಮಾಗೆ ದೆಹಲಿ ಪೊಲೀಸರು ಪರೋಕ್ಷ ಎಚ್ಚರಿಕೆ ನೀಡಿದ್ದರು. ಮುಸ್ಲಿಮರು ನವಾಜ್ ಮಾಡುತ್ತಿರುವ ಹಳೇ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದ ವರ್ಮಾ, ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ದೆಹಲಿ ಪೊಲೀಸರು, ‘ಇದು ತಪ್ಪು. ವದಂತಿ ಹಬ್ಬಿಸುವುದಕ್ಕಾಗಿ ಹಳೇ ವಿಡಿಯೊವನ್ನು ಬಳಸಲಾಗಿದೆ. ಪೋಸ್ಟ್ ಮಾಡುವ ಮುನ್ನ ದೃಢೀಕರಿಸಿ, ವದಂತಿ ಹಬ್ಬಿಸಬೇಡಿ’ ಎಂದು ಪ್ರತಿಕ್ರಿಯಿಸಿದ್ದರು.