ಸರಕಾರದಿಂದ ರೈತ ವಿರೋಧಿ ನೀತಿ : ಉಡುಪಿ ಜಿಲ್ಲಾ ಕಾಂಗ್ರೆಸ್
ಉಡುಪಿ: ರೈತರು, ರೈತ ಸಂಘಟನೆಗಳ, ಬಳಕೆದಾರರ ತೀವ್ರ ವಿರೋಧದ ನಡುವೆಯೂ ವಿವಾದಿತ ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ತಂದು ಆಧ್ಯಾದೇಶದ ಮೂಲಕ ಜಾರಿಗೊಳಿಸಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ನೀತಿಯನ್ನು ಬಿಂಬಿಸುತ್ತದೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿದ್ದಾರೆ.
ಕೃಷಿ ಮಾರಾಟ ವ್ಯವಸ್ಥೆಯಲ್ಲಿ ಸರಕಾರದ ಹಿಡಿತ ಸಡಿಲಗೊಳಿಸಿ ಖಾಸಗಿ ವಲಯಕ್ಕೆ, ಒಪ್ಪಂದ ಕೃಷಿ ಕಂಪೆನಿಗಳಿಗೆ, ರಫ್ತುದಾರರಿಗೆ ನೇರವಾಗಿ ರೈತರಿಂದ ಖರೀದಿಸುವ ಅವಕಾಶ ಮಾಡಿಕೊಡುವ ಈ ಕಾಯಿದೆಯಿಂದ ರೈತ ಬೆಳೆದಿದ್ದನ್ನು ವ್ಯಾಪಾರಸ್ತರು, ಖಾಸಗಿ ಕಂಪೆನಿಗಳು ಆತನ ಮನೆ ಬಾಗಿಲಲ್ಲೇ ಖರೀದಿಸಬಹುದು ಎನ್ನಲಾಗಿದೆ. ಎಪಿಎಂಸಿ ಅನ್ನುವುದು ಒಂದು ಸಾಂಸ್ಥಿಕ ರಚನೆ ಇದರಲ್ಲೇ ಸಿಗದ ನ್ಯಾಯ ರೈತನಿಗೆ ಮನೆ ಬಾಗಿಲಲ್ಲಿ ಸಿಗುತ್ತೆ ಎನ್ನುವ ಯಾವ ಖಾತರಿಯಿದೆ?
ರೈತ ಬೆಳೆದ ಸ್ಥಳದಲ್ಲಿಯೇ ಮಾರಾಟ ವ್ಯವಸ್ಥೆ ತರುವ ಹಿಂದೆ ಯಾವ ಹುನ್ನಾರ ಅಡಗಿದೆ ಎಂಬುವುದೇ ನಿಗೂಢ. ಎಪಿಎಂಸಿ ವ್ಯಾಪ್ತಿಯ ಹೊರಗಡೆ ವ್ಯಾಪಾರ ನಡೆದರೆ ಸರಕಾರಕ್ಕೆ ದೊರಕುವ ಮಾರುಕಟ್ಟೆ ಕರ, ಸೆಸ್ ಹಾಗೆಯೇ ಕೆಲವು ಉತ್ಪನ್ನಗಳ ಮೇಲೆ ಬರುವ ಜಿ.ಎಸ್.ಟಿ. ಇತ್ಯಾದಿ ಮೂಲದ ಸಹಸ್ರಾರು ಕೋಟಿ ರೂಪಾಯಿ ಆದಾಯ ಕಡಿತವಾಗಬಹುದು. ಎಪಿಎಂಸಿ ಪ್ರಾಂಗಣದ ಒಳಗೆ ಬರದ ದೊಡ್ಡ ಪ್ರಮಾಣದ ಖರೀದಿದಾರರು ಸ್ವಯಂ ರೈತರ ಮನೆಗೆ ಬಂದು ಖರೀದಿಸುತ್ತಾರೆಯೇ? ರೈತರ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ಮತ್ತು ಧಾರಣೆ ದೊರಕುವಂತೆ ಮಾಡಬೇಕಾಗಿರುವುದು ಸರಕಾರದ ಕರ್ತವ್ಯ, ಆಹಾರ ಉತ್ಪನ್ನಗಳು ಬೇಡಿಕೆಯಿಲ್ಲದೆ ಕೊಳೆಯುವಂತಾಗಿ ರೈತರು ಹಣ್ಣು- ತರಕಾರಿ ರಸ್ತೆಗೆ ತಂದು ಸುರಿಯುವ ಪರಿಸ್ಥಿತಿಯನ್ನು ನಾವು ಕಂಡಿದ್ದೇವೆ. ಎಪಿಎಂಸಿಗಳು ಜನಸಾಮಾನ್ಯರಿಗಾಗಿ ಇರುವ ವ್ಯವಸ್ಥೆ ರೈತರು ಮತ್ತು ಗ್ರಾಹಕರ ನಡುವೆ ದಲ್ಲಾಳಿಗಳ ಕಾಟ ತಪ್ಪಿಸಿ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವ ವ್ಯವಸ್ಥೆ. ಕುಂದು ಕೊರತೆಗಳನ್ನು ಸರಿಪಡಿಸಿ ಇನ್ನಷ್ಟು ಬಲ ಪಡಿಸುವ ಚಿಂತನೆ ನಡೆಯಬೇಕಾದ ಸನ್ನಿವೇಶದಲ್ಲಿ ಸರಕಾರದ ತ್ವರಿತ ನಿರ್ಧಾರ ಖಂಡನೀಯ.
ಕೋಟ್ಯಾಂತರ ಕೃಷಿ ಉತ್ಪಾದಕರು, ಗ್ರಾಹಕರ ಭವಿಷ್ಯ ನಿರ್ಧರಿಸುವ ಈ ಕಾಯಿದೆಯನ್ನು ಅಧಿವೇಶನದಲ್ಲಿ ಚರ್ಚೆಯಿಲ್ಲದೆ, ರೈತರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸದೆ ಬದಲಾಗಿ ಕೊರೊನಾ ಸಂಕಷ್ಟದಲ್ಲಿರುವಾಗ ಯಾರ ಜೊತೆ ಚರ್ಚಿಸದೆ ಏಕಾಏಕಿ ಗುಟ್ಟಾಗಿ ಸುಗ್ರಿವಾಜ್ಞೆ ಮೂಲಕ ಕಾಯಿದೆ ಜಾರಿಗೊಳಿಸಿದ ಉದ್ದೇಶದ ಬಗ್ಗೆ ಜನರಲ್ಲಿ ಅನುಮಾನ ಮೂಡಿರುವುದು ಸಹಜ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿದ್ದಾರೆ.