ಉಡುಪಿ: ಶೀರೂರು ಮಠದ ಬಾಳೆ ಮುಹೂರ್ತ ಸಂಪನ್ನ

ಉಡುಪಿ: ಭಾವಿ ಪರ್ಯಾಯ ಶೀರೂರು ಮಠದ ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಮೊದಲನೆಯದ್ದಾದ ಬಾಳೆ ಮುಹೂರ್ತ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ವೃಶ್ಚಿಕ ಲಗ್ನ ಸುಹೂರ್ತದಲ್ಲಿ ನಗರದ ಪೂರ್ಣಪ್ರಜ್ಞ ಕಾಲೇಜು ಬಳಿಯ ಶೀರೂರು ಮಠದ ತೋಟದಲ್ಲಿ ನಡೆಯಿತು.

ಭಾವಿ ಪರ್ಯಾಯ ಪೀಠಾಧೀಶ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸುಮುಹೂರ್ತದಲ್ಲಿ‌ ವೇದ ವಾದ್ಯ ಘೋಷದ ನಡುವೆ ಬಾಳೆ ಸಸಿ‌ ನೆಟ್ಟರು. ಜೊತೆಗೆ ತುಳಸಿ ಸಸಿ ಹಾಗೂ ಕಬ್ಬಿನ ಕಂದು ನೆಡಲಾಯಿತು. ವಿದ್ವಾನ್ ಗಿರಿರಾಜ ಉಪಾಧ್ಯಾಯ ಕಂಬ್ಳಕಟ್ಟ ಧಾರ್ಮಿಕ ವಿಧಿ ನೆರವೇರಿಸಿದರು. ಶೀರೂರು ಮಠದ ದಿವಾನ ಡಾ. ಉದಯ ಸರಳತ್ತಾಯ, ಶ್ರೀಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್ ಇದ್ದರು. ಶ್ರೀಮಠದ ಮೇಸ್ತ್ರಿ ಪದ್ಮನಾಭ ಸಹಕರಿಸಿದರು.

ಶೀರೂರು ಮಠದಲ್ಲಿ ಪ್ರಾರ್ಥನೆ: ಬೆಳಿಗ್ಗೆ 5.30ಕ್ಕೆ ಶೀರೂರು ಮಠದ ಉಪಾಸ್ಯದೇವರಾದ ಶ್ರೀವಿಠಲ ದೇವರ ಸನ್ನಿಧಾನದಲ್ಲಿ ಫಲನ್ಯಾಸಪೂರ್ವಕ ಪ್ರಾರ್ಥನೆ ಸಲ್ಲಿಸಿ, ಶ್ರೀಅನಂತೇಶ್ವರ- ಚಂದ್ರೇಶ್ವರ, ಕೃಷ್ಣ ಮುಖ್ಯಪ್ರಾಣ ಹಾಗೂ ವೃಂದಾವನ ದರ್ಶನಗೈದು ಪ್ರಾರ್ಥನೆ ಸಲ್ಲಿಸಿದ ಬಳಿಕ ಶೀರೂರು ಮಠಕ್ಕಾಗಮಿಸಲಾಯಿತು. ಶೀರೂರು ಮಠದಿಂದ ಪಿಪಿಸಿ ಬಳಿಯ ತೋಟದ ವರೆಗೆ ಬಾಳೆ ಸಸಿಗಳೊಂದಿಗೆ ವೇದ- ವಾದ್ಯ ಘೋಷ, ಭಜನೆಯೊಂದಿಗೆ ಮೆರವಣಿಗೆಯಲ್ಲಿ ತೆರಳಲಾಯಿತು.

ಅನ್ನದಾನ, ವೇದಘೋಷಕ್ಕೆ ಆದ್ಯತೆ ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ವೇದವರ್ಧನತೀರ್ಥ ಶ್ರೀಪಾದರು, 2026ರ ಜ.18ರಿಂದ ಎರಡು ವರ್ಷ ಕಾಲದ ತಮ್ಮ ಪ್ರಥಮ ಪರ್ಯಾಯ ಅವಧಿಯಲ್ಲಿ ಅನ್ನದಾನಕ್ಕೆ ಆದ್ಯತೆ ನೀಡಲಾಗುವುದು. ಕೃಷ್ಣ ದರ್ಶನಕ್ಕೆ ಆಗಮಿಸುವ ಎಲ್ಲ ಭಕ್ತರಿಗೂ ಏಕರೂಪದ ಪ್ರಸಾದ ಲಭಿಸುವಂತೆ ವ್ಯವಸ್ಥೆ ಮಾಡಲಾಗುವುದು.
ಅಂತೆಯೇ ಕೃಷ್ಣ ಸನ್ನಿಧಿಯಲ್ಲಿ ಪೂಜೆ, ಪ್ರವಚನ ಇತ್ಯಾದಿಗಳ ನಡುವೆಯೇ ಚತುರ್ವೇದ ಪಾರಾಯಣ, ವೇದ ಪಾಠ ನಡೆಸಲುದ್ದೇಶಿಸಲಾಗಿದೆ ಎಂದರು.

ಸ್ವಾಗತಿಸಿ, ಬಾಳೆ ಮುಹೂರ್ತದ ಹಿನ್ನೆಲೆ ವಿವರಿಸಿದ ಮಠದ ದಿವಾನ ಡಾ. ಉದಯ ಸರಳತ್ತಾಯ, ಆಚಾರ್ಯ ಮಧ್ವರು ಮತ್ತು ಭಾವಿಸಮೀರ ಶ್ರೀ ವಾದಿರಾಜರು ಹಾಕಿಕೊಟ್ಟ ಸಂಪ್ರದಾಯದಂತೆ ಕೃಷ್ಣನ ಪೂಜೆ ಕೇವಲ ಬಿಂಬದಲ್ಲಿ ಮಾತ್ರ ನಡೆಯದೇ ಚೇತನರೂಪಿಯಾಗಿರುವ ಜನಸಾಮಾನ್ಯರಲ್ಲೂ ಕೃಷ್ಣನನ್ನು ಕಾಣುವ ಕ್ರಮವಾಗಿ ಅನ್ನದಾನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಪರ್ಯಾಯ ಸಂದರ್ಭದಲ್ಲಿ ಬಾಳೆ ಎಲೆಗಾಗಿ ಬಾಳೆತೋಟ ನಿರ್ಮಿಸುವ, ಬಾಳೆ ಎಲೆಯಲ್ಲಿ ಕೃಷ್ಣನಿಗೆ ನೈವೇದ್ಯ ಸಮರ್ಪಿಸಿ ಅದನ್ನು ಪ್ರಸಾದ ರೂಪವಾಗಿ ಭಕ್ತರಿಗೆ ವಿತರಿಸುವ ಆಶಯ ಬಾಳೆ ಮುಹೂರ್ತ ಹೊಂದಿದೆ. ಶ್ರೀಮಠದ ಸುಮಾರು ಒಂದು ಎಕರೆ ಜಾಗದಲ್ಲಿ ಭಕ್ತರಿಂದಲೇ ಒಂದು ಸಾವಿರ ಬಾಳೆ ಸಸಿ ನೆಟ್ಟು ಪೋಷಿಸಿ, ಪರ್ಯಾಯ ಕಾಲದಲ್ಲಿ ಅದನ್ನು ಬಳಸುವ ಆಶಯ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಭುವನಾಭಿರಾಮ ಉಡುಪ, ಶ್ರೀಪತಿ ಭಟ್ ಮೂಡುಬಿದಿರೆ, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಪ್ರಮುಖರಾದ ಮೋಹನ ಭಟ್, ವಾಸುದೇವ ಆಚಾರ್ಯ, ಶ್ರೀಕಾಂತ ನಾಯಕ್, ಗೋವಿಂದ ಭಟ್, ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ, ಡಾ.ಕೃಷ್ಣಪ್ರಸಾದ್, ಪ್ರಸಾದ್ ರಾಜ್ ಕಾಂಚನ್, ಪುತ್ತಿಗೆ ಮಠ ಕೊಠಾರಿ ರಾಮಚಂದ್ರ ಕೊಡಂಚ, ಪೇಜಾವರ ಮಠ ದಿವಾನ ರಘುರಾಮ ಆಚಾರ್ಯ ಮತ್ತು ಸಿಇಓ ಸುಬ್ರಹ್ಮಣ್ಯ ಸಾಮಗ ಮೊದಲಾದವರಿದ್ದರು.

Leave a Reply

Your email address will not be published. Required fields are marked *

error: Content is protected !!