ಉಡುಪಿ: ಜ.8 ರಂದು ಅದಮಾರು ಕಿರಿಯ ಮಠಾಧೀಶರ ಪುರಪ್ರವೇಶ

ಉಡುಪಿ: ಜನವರಿ 18 ರಂದು ಅದಮಾರು ಮಠದ ಪರ್ಯಾಯ ಮಹೋತ್ಸದ ಪೂರ್ವಭಾವಿಯಾಗಿ ನಡೆಯಲಿರುವ ಪುರಪ್ರವೇಶ ಜ. 8 ರಂದು ನಡೆಯಲಿದ್ದು, ಅದಮಾರು ಮಠದ ಕಿರಿಯ ಮಠಾಧೀಶರಾದ ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರನ್ನು ಮೆರವಣಿಗೆಯಲ್ಲಿ ಜೋಡುಕಟ್ಟೆಯಿಂದ ಸ್ವಾಗತಿಸಲಾಗುವುದೆಂದು ಎಂದು ಶ್ರೀ ಕೃಷ್ಣ ಸೇವಾ ಬಳಗ ಇದರ ಗೌರವಾಧ್ಯಕ್ಷರಾದ ರಘುಪತಿ ಭಟ್ ಹೇಳಿದರು.

ಶನಿವಾರ ಅದಮಾರು ಮಠದ ವಿಶ್ರಾಂತಿ ಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಅದಮಾರು ಸ್ವಾಮೀಜಿಯವರ ಪುರಪ್ರವೇಶದ ಮೆರವಣಿಗೆ ಜ. ೮ರ ಮಧ್ಯಾಹ್ನ ೨.೩೦ಕ್ಕೆ ಜೋಡುಕಟ್ಟೆಯಿಂದ ಆರಂಭವಾಗಲಿದೆ. ಸಂಜೆ ೫.೫೫ಕ್ಕೆ ಶ್ರೀಗಳು ಅದಮಾರು ಮಠವನ್ನು ಪ್ರವೇಶಿಸುವರು. ಮೆರವಣಿಗೆಯು ಕೋರ್ಟ್ ರಸ್ತೆ, ಹಳೆ ಅಂಚೆ ಕಛೇರಿ, ತೆಂಕಪೇಟೆ ಮಾರ್ಗವಾಗಿ ಸಾಗಲಿದೆ ಎಂದರು.

ಹಿಂದಿನ ಪರ್ಯಾಯಗಳಲ್ಲಿ ಹೊರೆಕಾಣಿಕೆಯನ್ನು ಏಕಕಾಲದಲ್ಲಿ ಸ್ವೀಕರಿಸಲಾಗುತ್ತಿತ್ತು, ಆದರೆ ಈ ಬಾರಿ ಪ್ರತಿ ೧೫ ದಿನಗಳಿಗೊಮ್ಮೆ ಹೊರೆಕಾಣಿಕೆ ಸ್ವೀಕರಿಸಲು ಹಿರಿಯ ಸ್ವಾಮೀಜಿ ವಿಶ್ವಪ್ರಿಯ ತೀರ್ಥರು ನಿರ್ಧಾರಿಸಿದ್ದಾರೆ. ಆದ್ದರಿಂದ ಜ. ೧೫ರಂದು ಅದಮಾರು, ಮಲ್ಪೆ, ಕೊಡವೂರು, ಮಟ್ಟು ಗ್ರಾಮದ ಗ್ರಾಮಸ್ಥರಿಂದ ಮೊದಲ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ನಂತರ ಪ್ರತಿ ೧೫ ದಿನಗಳಿಗೊಮ್ಮೆ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಅದಮಾರು ಮಠದ ಪರ್ಯಾಯೋತ್ಸವದಲ್ಲಿ ಪರಿಸರ ಜಾಗೃತಿಗೆ ಗಮನ ಹರಿಸಲಾಗುತ್ತಿದ್ದು, ಪ್ಲಾಸ್ಟಿಕ್ ನಿರ್ಮೂಲನಕ್ಕೆ ಸಾರ್ವಜನಿಕ ಜಾಗೃತಿ ಮೂಡಿಸಲಾಗುವುದು ಎಂದರು.

ಪುರಪ್ರವೇಶದಲ್ಲಿ ತಳಿರು ತೋರಣಗಳ ಅಲಂಕಾರ, ಬಾಳೆ ಗಿಡಗಳನ್ನು ಬೇರು ಸಹಿತ ಕಿತ್ತು ತಂದು ಮೆರವಣಿಗೆಯಲ್ಲಿ ಬಳಸಿ ಬಳಿಕ ಆ ಗಿಡಗಳನ್ನು ಮತ್ತೆ ನೆಡಲು ಬಳಸುವಂತಿರಬೇಕೆನ್ನುವುದು ಶ್ರೀಗಳ ಇನ್ನೊಂದು ಪರಿಸರ ಪ್ರೀತಿಯ ಚಿಂತನೆಯಾಗಲಿದೆ. ಸಾಂಪ್ರದಾಯಿಕವಾಗಿ ಪುರಪ್ರವೇಶ ಮಾಡುವ ಶ್ರೀಗಳು ತಮ್ಮ ಮಠದ ಪರಂಪರೆಯನ್ನು ಸ್ಮರಿಸಿಕೊಳ್ಳುವುದು ಸಂಪ್ರದಾಯವಾಗಿದ್ದು ಅದರಂತೆ ಆಚಾರ್ಯ ಮಧ್ವರು, ಶ್ರೀ ನರಸಿಂಹ ತೀರ್ಥರಿಂದ ಮೊದಲ್ಗೊಂಡು ಶ್ರೀ ವಿಬುಧೇಶ ತೀರ್ಥರ ವರೆಗಿನ ಪೂರ್ವ ಯತಿಗಳ ಹೆಸರುಗಳನ್ನು ಬರೆದು ಸ್ವಾಗತ ತೋರಣದ ಕಂಬಗಳಿಗೆ ಅಳವಡಿಸಲಾಗುವುದು.

ಜಾನಪದ ಸೊಬಗುಳ್ಳ ಪ್ರಕೃತಿಯಿಂದ ಪಡೆದು ಪ್ರಕೃತಿಯ ನಿರ್ಮಾಣದಂತಹ ಸಹಜ ಅಲಂಕಾರಗಳುಳ್ಳ ಸ್ವಾಗತ ಕಮಾನುಗಳನ್ನು ನಿರ್ಮಿಸಲು ಆಸಕ್ತ ಯುವಕ ಯುವತಿಯರಿಗೆ ಅವಕಾಶ ಕಲ್ಪಿಸಲಾಗಿದೆ. ಪರ್ಯಾಯ ಪೂರ್ವಭಾವಿ ಸಂಚಾರ ಪೊರೈಸಿ ಆಗಮಿಸುವ ಸ್ಮಾಮೀಜಿ ಜೋಡುಕಟ್ಟೆಯಿಂದ ರಥಬೀದಿ ಪ್ರವೇಶ ಮಾಡಲಿದ್ದು, ಪುರಪ್ರವೇಶ ವೈಭವದಲ್ಲಿ ಪರಂಪರೆಗೆ, ಸಂಪ್ರದಾಯಗಳಿಗೆ ತೌಳವ ಸಾಂಸ್ಕೃತಿಕ ಸೊಬಗಿಗೆ ಪ್ರಾಧಾನ್ಯತೆ ನೀಡಲಿದ್ದು ಆಧುನಿಕ ಸಂಭ್ರಮಗಳಿಗೆ ಅವಕಾಶವಿರುವುದಿಲ್ಲ ಎಂದರು.

ರಥಬೀದಿ ಪ್ರವೇಶದ ಬಳಿಕದ ಕಾರ್ಯಕ್ರಮಗಳು ಪೂರ್ವ ನಿರ್ಧರಿತ ವಿಧಾನದಂತೆ ನಡೆಯಲಿದ್ದು, ಬಳಿಕ ಸಂಜೆ ಪೂರ್ಣಪ್ರಜ್ಞಾ ಮಂಟಪ ರಥಬೀದಿ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಗರಸಭೆ ಮತ್ತು ಕೃಷ್ಣಾಸೇವಾ ಬಳಗದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿದ್ದು ಪೌರಾಡಳಿತ ಹಾಗೂ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಸನ್ಮಾನಿಸಲಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಪರ್ಯಾಯದ ಅಂಗವಾಗಿ ಪೌರಸಮ್ಮಾನ ಅಭಿನಂದನಾ ಕಾರ್ಯಕ್ರಮದಲ್ಲಿ ಗಂಧದ ಹಾರ, ಮಣಿಗಳನ್ನು ಪೊಣೀಸಿ ಮಾಡಿದ ಹಾರಗಳನ್ನು ಹಾಕಲು ಅವಕಾಶವಿಲ್ಲ. ಪುರಪ್ರವೇಶದ ಸರ್ವ ವ್ಯವಸ್ಥೆಗಳು ಸರಳ ಸುಂದರವಾಗಿರುತ್ತದೆ ಎಂದರು.

ಪರ್ಯಾಯದಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಗಳ ಉಪಯೋಗವನ್ನು ರದ್ದುಗೊಳಿಸಲಾಗಿದ್ದು ಬಟ್ಟೆಯ ಫಲಕ, ಅಥವಾ ಬ್ಯಾನರ್ ಗಳನ್ನು ಬಳಸುವಂತೆ ವಿನಂತಿಸಿಕೊಳ್ಳಲಾಗಿದೆ. ಕಾರ್ಯಕ್ರಮವು ಸಂಪೂರ್ಣ ಪರಿಸರ ಸ್ನೇಹಿಯಾಗಿರಿಸುವುದರೊಂದಿಗೆ ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಯಶಪಾಲ್ ಸುವರ್ಣ, ಪ್ರದೀಪ್ ರಾವ್, ದಿನೇಶ್ ಪುತ್ರನ್, ಸುಬ್ರಹ್ಮಣ್ಯ ಮಾರ್ಪಳ್ಳಿ, ರಾಘವೇಂದ್ರ, ಗೋವಿಂದರಾಜ್, ವೈ. ಆರ್. ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!