ಉಡುಪಿ: ಪೇಜಾವರ ಶ್ರೀ ಆರೋಗ್ಯ ಇನ್ನೂ ಗಂಭೀರವಾಗಿಯೇ ಇದೆ

ಉಡುಪಿ: ಕಳೆದ ನಾಲ್ಕು ದಿನಗಳಿಂದ ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳು ವೈದ್ಯರ ಚಿಕಿತ್ಸೆಗೆ ಸ್ಪಂದಿಸದಿರುವುದು ಅವರ ಭಕ್ತ ವಲಯವನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿರುವ ಶ್ರೀಗಳನ್ನು ಮಣಿಪಾಲದ ತಜ್ಞ ವೈದ್ಯರ ತಂಡ ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದು, ನಿರೀಕ್ಷಿತ ಫಲ ಸಿಕ್ಕಿಲ್ಲ. ಪರಿಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ಸೋಮವಾರ ವೈದ್ಯರು ತಿಳಿಸಿದ್ದಾರೆ.

ಇಂದು ಪೇಜಾವರ ಶ್ರೀಗಳ ಶಿಷ್ಯೆ , ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಸೋಮವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸ್ವಾಮೀಜಿ ಅವರು ಗುಣಮುಖರಾಗಬೇಕು ಎಂದು ವೈದ್ಯರ ತಂಡ ನಿರಂತರವಾಗಿ ಶ್ರಮಿಸುತ್ತಿದೆ. ಈಗ ದೆಹಲಿಯ ಏಮ್ಸ್‌ನ ತಜ್ಞ ವೈದ್ಯರ ನೆರವೂ ಸಿಗುತ್ತಿದೆ. ಶ್ರೀಗಳು ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದರು. ವಿಶ್ವ ಹಿಂದೂ ಪರಿಷತ್ ಸ್ಥಾಪನೆ ಮಾಡಿದಾಗ ಪೇಜಾವರ ಶ್ರೀಗಳು ಸಂಘಟನೆಯ ನೇತೃತ್ವ ವಹಿಸಿದ್ದರು. ಸಮಾಜ ಸುಧಾರಕರಕಾಗಿರುವ ಶ್ರೀಗಳಿಗೆ ವಿಶ್ವದಾದ್ಯಂತ ಭಕ್ತರು ಅಭಿಮಾನಿಗಳಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ರಾಷ್ಟ್ರದ ಗಮನ ಸೆಳೆದಿದ್ದಾರೆ. ಇಂತಹ ಸಂತರ ಅವಶ್ಯಕತೆ ಸಮಾಜಕ್ಕೆ ಅಗತ್ಯವಿದೆ ಎಂದರು.

ಈಗಾಗಲೇ ರಾಜ್ಯಾದಾದ್ಯಂತ ಅವರ ಸಾವಿರಾರು ಭಕ್ತರು ವಿವಿಧ ಹೋಮ, ಹವನ, ಮಾಡಿ ಶ್ರೀಗಳು ಶೀಘ್ರ ಗುಣಮುಖವಾಗಿ ಬಂದು ಮತ್ತೆ ಶ್ರೀಕೃಷ್ಣ ಪೂಜಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂಬ ಭಕ್ತರ ಪ್ರಾರ್ಥನೆ ಮುಂದುವರಿದಿದೆ.

ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿ, ಶ್ರೀಗಳಿಗೆ ಎಕ್ಸ್‌ರೇ ಹಾಗೂ ಸ್ಕ್ಯಾನಿಂಗ್ ಮಾಡಲಾಗಿದ್ದು, ರಾತ್ರಿ ಎಂಆರ್‌ಐ ಸ್ಕ್ಯಾನ್ ಮಾಡಲಿದ್ದಾರೆ. ವರದಿ ಬಂದ ಬಳಿಕ ವೈದ್ಯರು ಚರ್ಚಿಸಿ ಮುಂದೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಶ್ರೀಗಳು ಚಿಕಿತ್ಸೆಗೆ ಸ್ವಲ್ಪ ಸ್ಪಂದಿಸುತ್ತಿದ್ದಾರೆ. ಶೀಘ್ರ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ವೈದ್ಯರು ತಿಳಿಸಿದರು.

ಸೋಮವಾರವೂ ಗಣ್ಯರು, ಮಠಾಧೀಶರು ಆಸ್ಪತ್ರೆಗೆ ಭೇಟಿನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಉಡುಪಿಯ ಬಿಷಪ್ ಜೆರಾಲ್ಡ್ ಐಸಾಕ್ ಲೊಬೊ, ಕಾಂಗ್ರೆಸ್ ಮುಖಂಡರಾದ ಎಂ.ಬಿ.ಪಾಟೀಲ್, ಜಮೀರ್ ಅಹಮ್ಮದ್, ಉತ್ತರಾಧಿ ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ, ವಿದ್ಯಾಭೂಷಣರು ಭೇಟಿನೀಡಿದ್ದರು.

Leave a Reply

Your email address will not be published. Required fields are marked *

error: Content is protected !!