ಉಡುಪಿ: ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ಮಾ.12-15 ಜೀರ್ಣೋದ್ಧಾರ, ಪುನರ್ ಪ್ರತಿಷ್ಠೆ
ಉಡುಪಿ: ಇದೇ ಮಾರ್ಚ್ 12 ರಿಂದ15 ವರೆಗೆ ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜೀಣೋದ್ಧಾರ ಪುನರ್ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ ಎಂದು ರವಿವಾರ ದೇವಸ್ಥಾನದ ಆಡಳಿತ ಮೊಕ್ತೇಸರ ಮತ್ತು ಸಮಿತಿ ಕಾರ್ಯಾಧ್ಯಕ್ಷ ಪಿ ವಿಠ್ಠಲದಾಸ್ ಶೆಣೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾರ್ಚ್ 12 ರಂದು ಪ್ರಾರ್ಥನೆ ಸಹಿತ ವಿವಿಧ ಧಾರ್ಮಿಕ ವಿಧಿಗಳು, ಮಧ್ಯಾಹ್ನ4.30 ಕ್ಕೆ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮಹೂರ್ತ, ಮಾರ್ಚ್ 13, 14ಕ್ಕೆ ಬೆಳಿಗ್ಗೆ ಮತ್ತು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು .
ಮಾ. 15ರ ಬೆಳಗ್ಗೆ 5 ಕ್ಕೆ ಪಂಚಾಮೃತ ಕಲಶಾಭಿಷೇಕ, ಶತ ಕಲಶಾಭಿಷೇಕ, ಕನಕಾಭಿಷೇಕ, ಗಂಗಾ ಜಲಾಭಿಷೇಕ,6.30 ಕ್ಕೆ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರ ಆಗಮನ, ಅವರ ಅಮೃತ ಹಸ್ತದಿಂದ ಯಜ್ಞದ ಪೂರ್ಣಾಹುತಿ, ಪೂಜೆ , 9.35 ಕ್ಕೆ ಸವೀಕೃತ ದೇವಗೃಹಗಳಲ್ಲಿ ಪರಿವಾರ ದೇವರ ಸ್ಥಿರ ಪ್ರತಿಷ್ಠೆ ನಡೆಯಲಿದೆ.
ಸುಮಾರು 40 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ದೇವಾಲಯವು ಶಿಥಿಲಗೊಂಡ ಕಾರಣಕ್ಕೆ ಹಿಂದೆ ನಿರ್ಮಿಸಿದ ರಚನೆಗಳು ಶಿಥಿಲಗೊಂಡ ಪ್ರಸ್ತುತ ಸುತ್ತುಪೌಳಿಯ ಛಾವಣಿಯನ್ನು ಮರದ ಹಲಗೆಗಳಿಂದ ನಿರ್ಮಿಸಿ, ಮೇಲೆ ತಾಮ್ರದ ಫಲಕಗಳನ್ನು ಹೊಂದಿಸಲಾಗಿದೆ ಸುತ್ತಲೂ ಕೆಂಪುಕಲ್ಲಿನ ಗೋಡೆಗೆ ಮತ್ತು ಕಂಬಗಳಿಗೆ ಶಿಲೆಯ ಫಲಕಗಳನ್ನು ಅಳವಡಿಸಲಾಗಿದೆ.
ಪರಿವಾರ ದೇವರ ಗರ್ಭಗುಡಿಗಳನ್ನು ಶಿಲಾಮಯವಾಗಿ ನಿರ್ಮಿಸಲಾಗಿದೆ. ಗರ್ಭಗುಡಿ ದಾರ, ಬಾಗಿಲುಗಳನ್ನು ಬೆಳ್ಳಿಯಿಂದ ರಚಿಸಲಾಗಿದೆ. ಗರ್ಭಗುಡಿಯ ಎದುರಿನ ನಮಸ್ಕಾರ ಮಂಟಪದ ಮೇಲುಚ್ಚಿಗೆ ಮತ್ತು ಜಯ ವಿಜಯರ ಬಿಂಬಗಳಿಗೆ ಬೆಳ್ಳಿ ಹೋದಿಸಲಾಗಿದೆ. ಜೀರ್ಣೋದ್ದಾರ ಕೆಲಸಗಳಿಗೆ ಒಟ್ಟು 6.5 ಟನ್ ತಾಮ್ರ, 2500 ಸಿಎಫ್‌ಟಿ ಹೆಬ್ಬಲಸು, 150 ಸಿಎಫ್‌ಟಿ ಸಾಗುವಾನಿ ಮರ, 200 ಕೆ.ಜಿ. ಬೆಳ್ಳಿಯನ್ನು ಬಳಸಲಾಗಿದೆ.
ಮರದ ಕೆಲಸಗಳನ್ನು ಅಂಬಲಪಾಡಿ ಗೋಪಾಲಾಚಾರ್ಯರ ತಂಡ, ಬೆಳ್ಳಿ ಕೆಲಸಗಳನ್ನು ಉಡುಪಿಯ ಕೃಷ್ಣ ಕಿಣಿಯವರ ತಂಡ, ಶಿಲ್ಪಕಲೆಗಳನ್ನು ಕಾರ್ಕಳದ ಅಶೋಕ್ ಅವರ ತಂಡ ನಿರ್ವಹಿಸಿದೆ. ದೇವಸ್ಥಾನದಲ್ಲಿ ಪ್ರತಿಷ್ಠೆಯಾಗಿ 125ನೆಯ ವರ್ಷಕ್ಕೆ ಪಾದಾರ್ಪಣೆ ಸುಸಂದರ್ಭದಲ್ಲಿ ಸುಮಾರು 5 ಕೋ.ರೂ. ವೆಚ್ಚದ ಜೀಣೋದ್ಧಾರ ಕಾರ್ಯ ಭರದಿಂದ ಸಾಗಿದೆ.