ಉಡುಪಿ: ಹಸಿರು ವಲಯದಲಿದ್ದರೂ ಸೆಕ್ಷನ್ 144(3) ಮೇ 3 ರವರೆಗೆ ಮುಂದುವರಿಕೆ
ಉಡುಪಿ: ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆ ನಡೆಯಬೇಕು ಎಂಬ ಕಾರಣಕ್ಕಾಗಿ ಸಣ್ಣ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಹವಾನಿಯಂತ್ರಣ ವ್ಯವಸ್ಥೆಯನ್ನು ಎಲ್ಲಿಯೂ ಬಳಸಬಾರದು. ಸ್ವಚ್ಛತೆ, ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿಕೊಂಡು ವ್ಯಾಪಾರ ವಹಿವಾಟುಗಳನ್ನು ನಡೆಸಬಹುದು .
144 ಸೆಕ್ಷನ್ ಜಾರಿಯಲ್ಲಿರುತ್ತದೆ. ಐದು ಮಂದಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಮದುವೆ, ಅಂತ್ಯಕ್ರಿಯೆ ಮುಂತಾದ ಕಾರ್ಯಕ್ರಮಗಳು ಜಿಲ್ಲಾಡಳಿತದ ನಿಗಾದಲ್ಲಿಯೇ ನಡೆಸಬೇಕು. ಕೆಲಸದ ಸ್ಥಳಗಳಲ್ಲಿ ಟೆಂಪರೇಜರ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು. 65 ವರ್ಷಕ್ಕಿಂತ ಮೇಲಿನ ಮತ್ತು 5 ವರ್ಷದ ಕೆಳಗಿನವರನ್ನು ಮನೆಯಲ್ಲೇ ಇರುವಂತೆ ನೋಡಿಕೊಳ್ಳಬೇಕು. ಆರೋಗ್ಯ ಸೇತು ಆ್ಯಪ್ ಅನ್ನು ಬಳಸಬೇಕು ಎಂದು ಸೂಚನೆವಿದೆ.
ಕಾಮಗಾರಿಗಳನ್ನು ನಡೆಸುವಲ್ಲಿ ಆಗಾಗ ಕೈ ತೊಳೆಯಲು ವ್ಯವಸ್ಥೆ ಮಾಡಬೇಕು. ಊಟ ಮಾಡುವಾಗ ಸಹಿತ ಅಂತರ ಕಾಪಾಡಿಕೊಳ್ಳಬೇಕು. ಸ್ವಚ್ಛತೆಗೆ ಧಕ್ಕೆ ತರಬಾರದು. ನಗರ ಪ್ರದೇಶಗಳನ್ನು ಹೊರತುಪಡಿಸಿ ಕೈಗಾರಿಕೆಗಳು, ಉದ್ದಿಮೆಗಳು ಕಾರ್ಯನಿರ್ವಹಿಸಬಹುದು. ಕನಿಷ್ಠ ಸಿಬ್ಬಂದಿಯನ್ನಿಟ್ಟುಕೊಂಡು ನಿಯಮ ಮೀರದೇ ಕೆಲಸ ಮಾಡಬೇಕು. ತಮ್ಮ ಸಿಬ್ಬಂದಿಯನ್ನು ಕರೆತರಲು, ಬಿಡಲು ಆಯಾ ಸಂಸ್ಥೆಗಳೇ ವ್ಯವಸ್ಥೆ ಮಾಡಿಕೊಳ್ಳಬೇಕು.
ಅವಕಾಶ ನೀಡಿರುವಲ್ಲಿ ಸ್ವಚ್ಛತೆ, ಮಾಸ್ಕ್, ಅಂತರ ಮುಂತಾದ ನಿಯಮಗಳನ್ನು ಮೀರಿದರೆ ಅಂಥ ಅಂಗಡಿಗಳನ್ನು, ಸೆಕ್ಟರ್‌ಗಳನ್ನು ಬಂದ್ ಮಾಡಿ ಸೀಲ್ ಮಾಡಲಾಗುವುದು.
‘ಉಗುಳಿದರೆ ದಂಡ’
ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ ವಿಧಿಸಲು ಕರ್ನಾಟಕ ಪೊಲೀಸ್ ಆ್ಯಕ್ಟ್‌ನಲ್ಲಿ ಹಿಂದೆಯೇ ಅವಕಾಶ ನೀಡಲಾಗಿದೆ. ಕೋವಿಡ್– 19 ಬಂದಿರುವುದರಿಂದ ಇನ್ನು ಮುಂದೆ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಉಗುಳಿದರೆ ದಂಡ ವಿಧಿಸಲಾಗುವುದು.
ಈಗಾಗಲೇ ಹಾಕಿರುವ ಬ್ಯಾರಿಕೇಡ್‌ಗಳನ್ನು ಕೂಡಲೇ ತೆರವುಗೊಳಿಸುವುದಿಲ್ಲ. ಅನಿವಾರ್ಯ ಓಡಾಟಕ್ಕೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಅದು ಮುಂದುವರಿಯಲಿದೆ. ಬಸ್, ರೈಲು, ಕಾರು, ಆಟೊ ಸಹಿತ ಯಾವುದೇ ಸಾರಿಗೆ ವ್ಯವಸ್ಥೆಗಳಿರುವುದಿಲ್ಲ.
ಯಾವುದೆಲ್ಲ ಇರುತ್ತವೆ?
ಪುಸ್ತಕ, ಲೇಖನ ಸಾಮಗ್ರಿ, ಜೆರಾಕ್ಸ್ ಅಂಗಡಿಗಳು, ಕನ್ನಡಕದ ಅಂಗಡಿಗಳು, ಹಾರ್ಡ್‌ವೇರ್, ಪ್ಲೈವುಡ್, ಕಬ್ಬಿಣ, ಸಿಮೆಂಟ್, ಬಣ್ಣದ ಅಂಗಡಿಗಳು, ಇಟ್ಟಿಗೆ ಬಟ್ಟಿಗಳು, ರೈಸ್‌ಮಿಲ್, ಫ್ಲೋರ್‌ಮಿಲ್, ಫೋಟೊ ಸ್ಟುಡಿಯೊ, ಆಯಿಲ್‌ಮಿಲ್, ಎಲೆಕ್ಟ್ರಿಕಲ್ ಶಾಪ್, ಪಾದರಕ್ಷೆ ಅಂಗಡಿಗಳು, ಮರಳು, ಕಲ್ಲು ಗಣಿಗಾರಿಕೆ, ಕ್ರಷರ್‌ಗಳು, ಟೈರ್, ಟ್ಯೂಬ್ ಅಂಗಡಿಗಳು, ಫ್ಯಾನ್ಸಿ ಸ್ಟೋರ್ಸ್, ಜನರಲ್ ಸ್ಟೋರ್ಸ್, ಸ್ಟೇಷನರಿ ಅಂಗಡಿಗಳು, ಸಾಮಿಲ್‌ಗಳು, ಕೃಷಿ ಮತ್ತು ತೋಟಗಾರಿಕೆ ಸಂಬಂಧಿಸಿ ಪರಿಕರಗಳನ್ನು ಒದಗಿಸುವ ಟಾರ್ಪಲಿನ್ ಅಂಗಡಿಗಳು, ಅಟೊಮೊಬೈಲ್ ಅಂಗಡಿಗಳು, ಮುದ್ರಣಾಲಯಗಳು, ಸಬ್ ರಿಜಿಸ್ಟ್ರರ್ ಕಚೇರಿಗಳು, ನಗರ ಪ್ರದೇಶಗಳಲ್ಲಿ ಕಟ್ಟಡ ಕಾಮಗಾರಿ ಚಟುವಟಿಕೆಯನ್ನು ಸ್ಥಳೀಯವಾಗಿ ಕಾರ್ಮಿಕರು ಲಭ್ಯವಿದ್ದರೆ ಮಾಡಬಹುದು.
ಯಾವುದೆಲ್ಲ ಇರುವುದಿಲ್ಲ?
ಸಣ್ಣದಿರಲಿ, ದೊಡ್ಡದಿರಲಿ ಯಾವುದೇ ಬಟ್ಟೆ ಅಂಗಡಿಗಳು ತೆರೆಯುವಂತಿಲ್ಲ. ಚಿನ್ನ, ಬೆಳ್ಳಿ ಅಂಗಡಿಗಳಿಗೆ ಅವಕಾಶವಿಲ್ಲ. ಸೆಲೂನ್, ಬ್ಯೂಟಿಪಾರ್ಲರ್‌ಗಳಿರುವುದಿಲ್ಲ. ಎಗ್‌ರೈಸ್, ಪಾನಿಪೂರಿ ಸಹಿತ ಬೀದಿ ಬದಿಯಲ್ಲಿ ಆಹಾರ ಪದಾರ್ಥ ಮಾರಲು ಅವಕಾಶವಿಲ್ಲ. ಮದ್ಯ, ಗುಟ್ಕಾ ತಂಬಾಕುಗಳನ್ನು ಮಾರಾಟ ಮಾಡುವಂತಿಲ್ಲ. ಈಗ ಸಡಿಲಿಕೆ ನೀಡಿದವುಗಳನ್ನು ಹೊರತುಪಡಿಸಿ ಉಳಿದೆಲ್ಲದಕ್ಕೂ ನಿರ್ಬಂಧ ಮೇ 3ರವರೆಗೆ ಮುಂದುವರಿಯಲಿದೆ.