ಉಡುಪಿ: ‘ಸ್ವಚ್ಛತಾ ಪರ್ವ 2020’ ಸಂದೇಶಕ್ಕೆ ಚಾಲನೆ
ಉಡುಪಿ :-ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ೫೦ ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಕ್ಲೀನ್ ಉಡುಪಿ ಪ್ರಾಜೆಕ್ಟ್, ಜೇಸಿಐ ಉಡುಪಿ ಸಿಟಿ, ಅಯ್ಯಪ್ಪ ಸೇವಾ ಸಮಾಜ ಉಡುಪಿ ಮತ್ತು ನಿರ್ಮಲ್ ತೋನ್ಸೆ ಸಹಭಾಗಿತ್ವದಲ್ಲಿ ಸ್ವಚ್ಛತಾ ಸಪ್ತಾಹ 2020 ಕಾರ್ಯಕ್ರಮದ ಹುತಾತ್ಮ ಸೈನಿಕ ಸ್ಮಾರಕಕ್ಕೆ ಗೌರವ ಸಲ್ಲಿಸುವ ಮೂಲಕ ಉದ್ಘಾಟನೆಗೊಂಡಿತು.
ಬಳಿಕ ಉಡುಪಿಯಿಂದ ಆಗುಂಬೆಯವರೆಗೆ ಸ್ವಚ್ಛತಾ ಸಂದೇಶ ಎಂಬ ದ್ವಿಚಕ್ರ ವಾಹನದ ಜನಜಾಗೃತಿ ಜಾಥಾಕ್ಕೆ ಕಿದಿಯೂರು ಉದಯಕುಮಾರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಚಾಲನೆ ನೀಡಿ ಮಾತನಾಡುತ್ತಾ, ಸ್ವಚ್ಛ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಶಿಸ್ತುಬದ್ಧವಾಗಿ ನಿರ್ವಹಿಸುವ ಮೂಲಕ ಸ್ವಚ್ಛತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನಿರಂತರವಾಗಿ ಪ್ರಯತ್ನಿಸಬೇಕು ಎಂದರು.
ತೆಂಕನಿಡಿಯೂರು ಸರಕಾರಿ ಕಾಲೇಜಿನ ಎಂ.ಎಸ್.ಡಬ್ಲ್ಯೂ ಸಂಯೋಜಕ ಡಾ. ದುಗ್ಗಪ್ಪ ಕಜೆಕಾರ್ ಮಾತನಾಡುತ್ತಾ, ಪರಿಸರ ಜಾಗೃತಿ ಮೂಡಿಸುವಲ್ಲಿ ಸರಕಾರೇತರ ಸಂಸ್ಥೆಗಳು ಸರಕಾರದೊಂದಿಗೆ ಪರಿಣಾಮಕಾರಿಯಾಗಿ ಸಹಭಾಗಿತ್ವವನ್ನು ಸ್ಥಾಪಿಸಿ ಸೂಕ್ತವಾದ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಿದರೆ ಜನರಲ್ಲಿ ಬದಲಾವಣೆಯನ್ನು ತರುವ ಮೂಲಕ ಅವರಲ್ಲಿ ಪರಿಸರ ಕಾಳಜಿಯ ಮನಸ್ಥಿತಿ ಜಾಗೃತಗೊಳಿಸಬಹುದು.
ಸ್ವಯಂಸೇವಾ ಸಂಸ್ಥೆಗಳು ಕಳೆದ ಕೆಲವು ವರ್ಷಗಳಿಂದ ತಳಮಟ್ಟದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿವೆ. ಅಂತಹ ಸಂಸ್ಥೆಗಳನ್ನು ಸರಕಾರವು ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಿದರೆ ಅವುಗಳ ಕಾರ್ಯನಿರ್ವಹಣೆಯ ವೇಗವು ಇನ್ನಷ್ಟು ಹೆಚ್ಚಿಸುವುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪರಿಸರ ಜಾಗೃತಿಗೆ ವಿಶೇಷ ಸೇವೆ ಸಲ್ಲಿಸಿದ ಡಾ. ಆರ್. ಎನ್. ಭಟ್ ಅವರನ್ನು ಗೌರವಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ವಿಶಿಷ್ಟ ಸೇವಾ ಪದಕ ಪಡೆದ ಮಾಜಿ ಯೋಧ ಜಗದೀಶ್ ಪ್ರಭು, ಜೇಸಿಐ ಉಡುಪಿ ಸಿಟಿ ಕಾರ್ಯದರ್ಶಿ ಉದಯ ನಾಯ್ಕ್, ಜಗದೀಶ್ ಶೆಟ್ಟಿ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಉಡುಪಿ ಜಿಲ್ಲಾ ಸಂಯೋಜಕ ವಿವೇಕ್, ಆಡ್ ಸಿಂಡಿಕೇಟ್ ಸಿ.ಎಫ್.ಓ ಕೃಷ್ಣಮೂರ್ತಿ ಕೊಡ್ಲಾ, ಅಯ್ಯಪ್ಪ ಸೇವಾ ಸಮಾಜ ಉಡುಪಿ ಅಧ್ಯಕ್ಷ ರಾಧಾಕೃಷ್ಣ ಮೆಂಡನ್, ಪ್ರದ್ಯುಮ್ನ, ಧೀರಜ್, ಪ್ರಮೋದ್, ಶಿವಕುಮಾರ್, ವಿನಯ್, ಬಸವರಾಜ್, ಚಂದ್ರು, ರಂಜಿತ್ ಶೆಟ್ಟಿ ಹಾವಂಜೆ, ಪ್ರಸನ್ನ ಕುಮಾರ್ ಉದ್ಯಾವರ, ಶರತ್, ರಕ್ಷಿತ್ ಕುಮಾರ್ ವಂಡ್ಸೆ, ನಿರ್ಮಲ್ ತೋನ್ಸೆ ಅಧ್ಯಕ್ಷ ವೆಂಕಟೇಶ್ ಕುಂದರ್, ಮಾಜಿ ಸೈನಿಕ ವಾದಿರಾಜ್ ಹೆಗ್ಡೆ, ಗಣೇಶ್ ಕೋಟ ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಗಣೇಶ್ ಪ್ರಸಾದ್ ಜಿ. ನಾಯಕ್ ಕಾರ್ಯಕ್ರಮ ನಿರೂಪಿಸಿದರು.