ಉಡುಪಿಯಲ್ಲೂ ಪೊಲೀಸ್/‌ ಆರ್ಮಿ ಮಾತಿನಚಕಮಕಿ: ವಿಡಿಯೋ ವೈರಲ್

ಉಡುಪಿ: ಬೆಳಗಾವಿ ಬಳಿಕ ಉಡುಪಿಯಲ್ಲೂ ಈಗ ಪೊಲೀಸ್ ವರ್ಸಸ್ ಸೇನೆಯ ಗಲಾಟೆ ನಡೆದಿರುವ ವಿಡಿಯೋ ವೈರಲ್ ಆಗುತ್ತಿದೆ.

ಆದಿಉಡುಪಿಯ ಹೆಲಿಪ್ಯಾಡ್ ಎನ್ ಸಿಸಿ ಮೈದಾನದಲ್ಲಿ ಸೈನಿಕರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಲಾಕ್ ಡೌನ್ ಉಲ್ಲಂಘಿಸಿ ಆಡದಂತೆ ಸೂಚನೆ ನೀಡಿದ ಪೊಲೀಸರೊಂದಿಗೆ ಯೋಧರು ವಾಗ್ವಾದಕ್ಕಿಳಿದಿರುವುದು ವಿಡಿಯೋದಲ್ಲಿದೆ.

ಆದಿಉಡುಪಿ ಹೆಲಿಪ್ಯಾಡ್ ನಲ್ಲಿರುವ ಭಾರತೀಯ ಭೂ ಸೇನೆಗೆ ಸಂಬಂಧಿಸಿದ ಜಾಗ ಕೂಡ ಇದ್ದು ಇಲ್ಲಿ ಸಂಜೆ ವೇಳೆ ಯೋಧರು ವ್ಯಾಯಾಮ ಮಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ನಾಯಕ್ ಯೋಧರಿಗೆ ಲಾಕ್ ಡೌನ್ ವಿಚಾರವನ್ನು ಮನದಟ್ಟು ಮಾಡಿದರೆನ್ನಲಾಗಿದೆ. ಆದರೆ ಪೊಲೀಸರ ಮಾತು ಕೇಳಲು ಸಿದ್ಧರಿಲ್ಲದ ಯೋಧರು ಅವರೊಂದಿಗೆ ವಾಗ್ವಾದಕ್ಕಿಳಿದರು. ಮೈದಾನದಲ್ಲಿ ಗುಂಪುಗೂಡಿಕೊಂಡು ಕಬಡ್ಡಿ ಮತ್ತು ವಾಲಿಬಾಲ್ ಆಡುವ ಸೈನಿಕರು ಪ್ರಶ್ನಿಸಲು ಬಂದ ಪೊಲೀಸ್ ಅಧಿಕಾರಿ ಜೊತೆ ವಾಗ್ವಾದ ನಡೆಸಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ರಜೆಯ ಮೇಲೆ ಬಂದಿದ್ದ ಯೋಧರೊಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದರು. ಮುಖಕ್ಕೆ ಮಾಸ್ಕ್ ಧರಿಸಿಲ್ಲ ಎಂಬ ಕಾರಣ ನೀಡಿ ಪೊಲೀಸರು ಅವರನ್ನು ಬಂಧಿಸಿದ್ದರು. ಇದರ ವಿಡಿಯೋ ಕೂಡ ವೈರಲ್ ಆಗಿ ರಾಜ್ಯ ಸರ್ಕಾರ ಮುಜುಗರಕ್ಕೆ ಒಳಗಾಗಿತ್ತು. ಸೇನೆಯ ಮಹಾನಿರ್ದೇಶಕರು ಈ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದರು. ನಿನ್ನೆ ಯೋಧನನ್ನು ನ್ಯಾಯಾಲಯ ಬಂಧನದಿಂದ ಬಿಡುಗಡೆ ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!