ಉಡುಪಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗೆ 20 ಸಾವಿರ ಜನರ ನಿರೀಕ್ಷೆ
ಉಡುಪಿ: ಸಹಬಾಳ್ವೆ ಉಡುಪಿ ವತಿಯಿಂದ ಜನವರಿ 30 (ಗುರುವಾರ) ರಂದು ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ ಉಡುಪಿ ಮಿಷನ್ ಆಸ್ಪತ್ರೆ ಬಳಿಯ ಕ್ರಿಶ್ಚಿಯನ್ ಪಿಯು ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯಿಂದ 20 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಸೇರುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. ಪ್ರಮುಖ ಭಾಷಣ ಮಾಡಲಿರುವ ದೇಶದಾದ್ಯಂತ ಹೋರಾಟಗಳ ಮೂಲಕ ಚಿರಪರಿಚಿತರಾಗಿರುವ ಉತ್ತರಪ್ರದೇಶ ಮೂಲದ ಚಂದ್ರಶೇಖರ್ ಅಜಾದ್, ವಿಧಾನಸಭೆಯ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .
ಅದೇ ರೀತಿ ಮಂಗಳೂರಿನ ಮಾಜಿ ಜಿಲ್ಲಾಧಿಕಾರಿ, ಚಿಂತಕ, ಸಾಮಾಜಿಕ ಹೋರಾಟಗಾರ ಸಸಿಕಾಂತ್ ಸೆಂಥಿಲ್, ಮಹೇಂದ್ರ ಕುಮಾರ್, ಕವಿತಾರೆಡ್ಡಿ ಮೆಹರೋಜ್ ಖಾನ್, ಭವ್ಯ ನರಸಿಂಹಮೂರ್ತಿ, ನಜ್ಮಾ ನಜೀರ್ , ಅಮೂಲ್ಯ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಸುಮಾರು ಇಪ್ಪತ್ತು ಸಾವಿರದಷ್ಟು ಪ್ರತಿಭಟನಾಕಾರರು ಆಗಮಿಸುವ ನಿರೀಕ್ಷೆ ಇರುವುದರಿಂದ 500 ಸ್ವಯಂಸೇವಕರು ಸಮಾವೇಶದಲ್ಲಿ ಭಾಗವಹಿಸುವ ಜನರಿಗೆ ಸಹಕಾರ ನೀಡುತ್ತಾರೆ .ಕ್ರೀಡಾಂಗಣದ ಸುತ್ತಮುತ್ತ 5 ಎಲ್ಇಡಿ ಟಿವಿ ,ಕುಡಿಯುವ ನೀರು ,ತುರ್ತು ಚಿಕಿತ್ಸಾ ಕ್ಲಿನಿಕ್ ,ಆಂಬುಲೆನ್ಸ್ ,ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.