ಉಡುಪಿ: ಜ.30ರಂದು ‘ನಾವು ಭಾರತೀಯರು’ ಪ್ರತಿಭಟನಾ ಸಭೆ

ಉಡುಪಿ: ಕೇಂದ್ರ ಸರ್ಕಾರದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಕಾಯ್ದೆಯನ್ನು ವಿರೋಧಿಸಿ ‘ನಾವು ಭಾರತೀಯರು’ ಪ್ರತಿಭಟನಾ ಸಭೆಯನ್ನು ಉಡುಪಿ ಕ್ರಿಶ್ಚಿಯನ್‌ ಹೈಸ್ಕೂಲ್‌ ಮೈದಾನದಲ್ಲಿ ಜ. 30ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ಸಹಬಾಳ್ವೆ ಉಡುಪಿ ಸಂಘಟನೆಯ ಅಧ್ಯಕ್ಷ ಅಮೃತ್‌ ಶೆಣೈ ಹೇಳಿದರು.

ಬುಧವಾರ ಆದಿಉಡುಪಿಯ ಅಂಬೇಡ್ಕರ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪ್ರತಿಭಟನಾ ಸಭೆಗೂ ಮೊದಲು ಮಧ್ಯಾಹ್ನ 2.30ಕ್ಕೆ ಉಡುಪಿ ಎಸ್ಪಿ ಕಚೇರಿಯಿಂದ ಬಹೃತ್‌ ಪಾದಯಾತ್ರೆ ಹೊರಡಲಿದೆ. ಪಾದಯಾತ್ರೆಯು ಎಸ್ಪಿ ಕಚೇರಿಯಿಂದ ಆರಂಭಗೊಂಡು ಬನ್ನಂಜೆ, ಸಿಟಿ ಬಸ್‌ ನಿಲ್ದಾಣ, ಕ್ಲಾಕ್‌ ಟವರ್‌, ಕೋರ್ಟ್‌ ರೋಡ್‌ ಮೂಲಕ ಮಿಷನ್‌ ಆಸ್ಪತ್ರೆಯ ಮಾರ್ಗವಾಗಿ ಕ್ರಿಶ್ಚಿಯನ್‌ ಹೈಸ್ಕೂಲ್‌ ಮೈದಾನದಕ್ಕೆ ತಲುಪಲಿದೆ. ಸುಮಾರು 10ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ.

ಸಭೆಯ ಭದ್ರತೆಗಾಗಿ 500 ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು ಎಂದರು. ಸಭೆಯಲ್ಲಿ ಪ್ರಧಾನ ಭಾಷಣಕಾರರಾಗಿ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ರಾವಣ್‌, ನಿವೃತ್ತ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌, ಚಿಂತಕ ಮಹೇಂದ್ರ ಕುಮಾರ್‌, ಸಾಮಾಜಿಕ ಹೋರಾಟಗಾರರಾದ ಕವಿತಾ ರೆಡ್ಡಿ, ಮೆಹರೋಝ್‌ ಖಾನ್‌, ಯುವ ನಾಯಕಿ ನಜ್ಮಾ ನಝೀರ್‌ ಚಿಕ್ಕನೇರಳೆ, ವಿದ್ಯಾರ್ಥಿ ನಾಯಕಿ ಅಮೂಲ್ಯ ಅವರು ಭಾಗವಹಿಸುವರು ಎಂದು ತಿಳಿಸಿದರು.

ಹೋರಾಟಗಾರರ ಧ್ವನಿ ಹತ್ತಿಕ್ಕುವ ಯತ್ನ:ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಡುವವರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ. ಗೋಲಿಬಾರ್‌, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಸರ್ಕಾರ ದಬ್ಬಾಳಿಕೆ, ದೌರ್ಜನ್ಯದ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದ್ದರಿಂದ ದೇಶದಲ್ಲಿ ಕಾನೂನು, ಸಂವಿಧಾನ ಇದೆಯೋ, ಇಲ್ಲವೋ ಎಂಬ ಸಂಶಯ ಕಾಡುತ್ತಿದೆ ಎಂದು ಟೀಕಿಸಿದರು.

ಮತದಾನದ ಹಕ್ಕು ಕಸಿಯುವ ಹುನ್ನಾರ:ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಕಾಯ್ದೆಯಲ್ಲಿ ಮುಸ್ಲಿಂ, ಆದಿವಾಸಿಗಳು, ದಲಿತರು ಹಾಗೂ ಹಿಂದುಳಿದ ವರ್ಗದವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಅಡಗಿದೆ. ಮೇಲ್ನೋಟದಲ್ಲಿ ಇದು ಮುಸ್ಲಿಮರ ವಿರೋಧಿ ಕಾನೂನು ಎಂದು ಗೋಚರಿಸಿದರೂ, ಹಂತ ಹಂತವಾಗಿ ಎಲ್ಲ ಸಮುದಾಯದ ಬುಡಕ್ಕೆ ಬರುತ್ತದೆ ಎಂದು ಸಂಘಟಕ ಶಶಿಧರ ಹೆಮ್ಮಾಡಿ ದೂರಿದರು.ಸುದ್ದಿಗೋಷ್ಠಿಯಲ್ಲಿ ದಸಂಸ ಪ್ರಧಾನ ಕಾರ್ಯದರ್ಶಿ ಸುಂದರ್‌ ಮಾಸ್ತರ್‌, ಪ್ರಶಾಂತ್ ಜತ್ತನ್, ವಿಲಿಯಂ ಮಾರ್ಟಿಸ್‌, ಅಬ್ದುಲ್‌ ಅಜೀಜ್‌ ಉದ್ಯಾವರ, ಕಲೀಲ್‌ ಅಹ್ಮದ್‌, ಚಂದ್ರಿಕಾ ಶೆಟ್ಟಿ, ಸಿರೀಲ್ ಮಥಾಯಸ್‌ ಇದ್ದರು.

Leave a Reply

Your email address will not be published. Required fields are marked *

error: Content is protected !!