ಉಡುಪಿ: ಸುಲ್ತಾನ್ ಗೋಲ್ಡ್‌ನಿಂದ ‘ನಾರಿಶಕ್ತಿ’ ಪ್ರಶಸ್ತಿ ಪ್ರದಾನ
ಉಡುಪಿ: ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ `ನಾರಿ ಶಕ್ತಿ-2020′ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳ ವಾರ ಸಂಸ್ಥೆಯ ಉಡುಪಿ ಮಳಿಗೆಯಲ್ಲಿ ಜರಗಿತು.
ಉಡುಪಿ ಮಹಿಳಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಉಪನಿರೀಕ್ಷಕಿ ವೈಲೆಟ್ ಫೆಮಿನಾ, ಕಾಪು ಉಳಿಯಾರಗೋಳಿಯ ದಂಡತೀರ್ಥ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಾರಿಜಾ ಮಧುಸೂದನ್, ಥೀಮ್ಸ್ ಬುಟಿಕ್‌ನ ಆಡಳಿತ ಪಾಲುದಾರೆ ಹಾಗೂ ಸಮಾಜ ಸೇವಕಿ ರೇಷ್ಮಾ ಸಯ್ಯದ್ ಫರೀದ್ ಅವರಿಗೆ ಸಂಸ್ಥೆಯ ಉಡುಪಿ ಶಾಖೆಯ ಮುಖ್ಯಸ್ಥ ಮೊಹಮ್ಮದ್ ಅಜಮಲ್ `ನಾರಿ ಶಕ್ತಿ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಮಹಿಳಾ ಪೊಲೀಸ್ ಉಪನಿರೀಕ್ಷಕಿ ವೈಲೆಟ್ ಫೆಮಿನಾ, ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆಯಾಗಿರುವ ಸುಲ್ತಾನ್ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ. ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ಬಹಳ ದೊಡ್ಡ ಕೆಲಸ ಎಂದು ತಿಳಿಸಿದರು.
ಇಂದು ಪೊಲೀಸ್ ಇಲಾಖೆಯು ಸಾಕಷ್ಟು ಜನಸ್ನೇಹಿಯಾಗಿ ಕೆಲಸ ಮಾಡು ತ್ತಿದೆ. ಹಿಂದೆ ಪೊಲೀಸರೊಂದಿಗೆ ಮಾತನಾಡಲು ಭಯ ಪಡುತ್ತಿದ್ದವರು ಈಗ ಪೊಲೀಸ್ ಠಾಣೆಗೆ ಬಂದು ಧೈರ್ಯದಿಂದ ದೂರು ನೀಡುತ್ತಿದ್ದಾರೆ. ಸುಲ್ತಾನ್ ಸಂಸ್ಥೆಯು ಪೊಲೀಸರ ಜನಸ್ನೇಹಿ ಕಾರ್ಯಕ್ರಮಕ್ಕೆ ಸಹಕಾರ ನೀಡುವ ಮೂಲಕ ಅಪಘಾತ, ಅಪರಾಧಗಳನ್ನು ನಿಯಂತ್ರಿಸುವಲ್ಲಿ ಕೈಜೋಡಿಸಬೇಕು ಎಂದರು.
ಸಂಸ್ಥೆಯ ಗ್ರಾಹಕ ಸಂಪರ್ಕ ಅಧಿಕಾರಿ ಮಂಜುನಾಥ್ ಅಮೀನ್ ಸ್ವಾಗತಿಸಿದರು. ಫ್ಲೋರ್ ಮೆನೇಜರ್ ಸಿದ್ಧೀಕ್ ಹಸನ್ ಉಚ್ಚಿಲ ಪ್ರಶಸ್ತಿ ವಿಜೇತರ ಪರಿಚಯ ಮಾಡಿ, ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಭಂಡಾರಿ, ಸಂಸ್ಥೆಯ ಸಹಾಯಕ ಮಾರಾಟ ವ್ಯವಸ್ಥಾಪಕ ಮುಹಮ್ಮದ್ ಸಾಮೀಲ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.