ಉಡುಪಿ: ಮೊಬೈಲ್ ಅಂಗಡಿ ದೋಚಿದ ಅಂತಾರಾಜ್ಯ ಕಳ್ಳರ ಬಂಧನ
ಉಡುಪಿ: ಮೊಬೈಲ್ ಅಂಗಡಿಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಮೊಬೈಲ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು 5 ರಂದು ನಗರದ ತ್ರೀವೇಣಿ ಜಂಕ್ಷನ್ ಬಳಿ ಇರುವ ಪ್ಲೇ ಜೋನ್ ಎಂಬ ಮೊಬೈಲ್ ಅಂಗಡಿಯಿಂದ ಸುಮಾರು ರೂ. 8,34,990/- ಬೆಲೆಬಾಳುವ ಮೊಬೈಲ್ ಪೋನ್ಗಳು ಹಾಗೂ ನಗದು ಕಳವಾಗಿತ್ತು.
ಈ ಪ್ರಕರಣ ಭೇದಿಸಿದ ಉಡುಪಿ ಪೊಲೀಸರು ಆರೋಪಿಗಳ ಮತ್ತು ಕಳವಾದ ಮೊಬೈಲ್ಗಳ ಪತ್ತೆ ಹಚ್ಚಿದ್ದು, ಸಾಂಗ್ಲಿಯ ರಜಾಕ್ ಅಸ್ಲಾಂ ಮುಜಾವರ್, (20) ಕುಷ್ಟಗಿ ತಾಲೂಕು ರಾಜಾಸಾಬ್ ನಾಯಕ್, (25) ಬಿಹಾರ ರಾಜ್ಯದ ಶಿವಾನ್ ಜಿಲ್ಲೆ, ದೀಪಕ್ ಪ್ರಸಾದ್, (25) ಮೂರನ್ನು ಬಂಧಿಸಲಾಗಿದೆ. ಬಂಧಿತರಿಂದ ಅಂದಾಜು ರೂ. 3ಲಕ್ಷ ಮೌಲ್ಯದ 16 ಮೊಬೈಲ್ಗಳು, ನಗದು ರೂ. 22000/- ಹಾಗೂ ಕಳವಿಗೆ ಉಯೋಗಿಸಿದ ಒಂದು ಕಬ್ಬಿಣದ ಸ್ಕ್ರೂ ಡ್ರೈವರ್, ಒಂದು ಕಟ್ಟಿಂಗ್ ಪ್ಲೇರ್, ಎರಡು ಬ್ಯಾಗ್, ಒಂದು ಮಾಸ್ಕ್, ಬಟ್ಟೆಯ ಕ್ಯಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಉಡುಪಿ ನಗರ ವೃತ್ತದ ನೀರಿಕ್ಷಕ ಮಂಜುನಾಥ, ಮಲ್ಪೆ ಠಾಣಾ ಪಿ.ಎಸ್.ಐ ತಿಮ್ಮೇಶ್, ಎಎಸ್ಐ ರವಿಚಂದ್ರ ಹಾಗೂ ಸಿಬ್ಬಂದಿಯವರಾದ ರಾಮು ಹೆಗ್ಡೆ ಡಿಸಿಐಬಿ, ರಾಘವೇಂದ್ರ ಡಿಸಿಐಬಿ, ಉಡುಪಿ ನಗರ ಠಾಣೆಯ ಲೋಕೇಶ್, ಬಾಲಕೃಷ್ಣ, ಇಮ್ರಾನ್, ಸಂತೋಷ್ ರಾಥೋಡ್ ಭಾಗವಹಿಸಿದ್ದರು.