ಉಡುಪಿ ಜ.30 ಸಿಎಎ ವಿರುದ್ಧ ಪ್ರತಿಭಟನೆ: ಪಾದೆಯಾತ್ರೆಗೆ ಅನುಮತಿ ನಿರಾಕರಣೆ

ಉಡುಪಿ: ಜ. 30ರಂದು ಸಿಎಎ ವಿರೋಧಿಸಿ ನಡೆಸುವ ಪ್ರತಿಭಟನಾ ಸಮಾವೇಶಕ್ಕೂ ಮೊದಲು ಎಸ್ಪಿ ಕಚೇರಿಯಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಬೃಹತ್‌ ಪಾದೆಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಪೊಲೀಸ್‌ ಇಲಾಖೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪಾದೆಯಾತ್ರೆಯನ್ನು ರದ್ದುಪಡಿಸಲಾಗಿದೆ. ಹಾಗಾಗಿ ಸಾರ್ವಜನಿಕರು ನೇರವಾಗಿ ಸಂಜೆ 4ಗಂಟೆಗೆ ಕ್ರಿಶ್ಚಿಯನ್‌ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಅಮೃತ್‌ ಶೆಣೈ ತಿಳಿಸಿದರು.

ಸಹಬಾಳ್ವೆ ಉಡುಪಿ ವತಿಯಿಂದ ಸಮಾನ ಮನಸ್ಕರ ಸಂಘಟನೆಗಳ ಸಹಯೋಗದಲ್ಲಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ವಿರೋಧಿಸಿ ಇದೇ 30ರಂದು ಉಡುಪಿಯ ಕ್ರಿಶ್ಚಿಯನ್‌ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಿರುವ ಬೃಹತ್‌ ಪ್ರತಿಭಟನಾ ಸಮಾವೇಶದ ಪೂರ್ವಸಿದ್ಧತೆ ಭರದಿಂದ ಸಾಗಿದೆ. ಈ ಕುರಿತು ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್‌ ಶೆಣೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಸಂಜೆ 4 ಗಂಟೆಗೆ ಸಮಾವೇಶ ಆರಂಭವಾಗಲಿದೆ. ಸುಮಾರು 15 ಸಾವಿರಕ್ಕೂ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಭೀಮ್‌ ಆರ್ಮಿ ಸ್ಥಾಪಕ ಚಂದ್ರಶೇಖರ್‌ ಆಜಾದ್‌, ಸಾಮಾಜಿಕ ಹೋರಾಟಗಾರರಾದ ಸಸಿಕಾಂತ್‌ ಸೆಂಥಿಲ್‌, ಮಹೇಂದ್ರ ಕುಮಾರ್‌, ಕವಿತಾ ರೆಡ್ಡಿ ಮೊದಲಾದವರು ಪ್ರಧಾನ ಭಾಷಣಕಾರರಾಗಿ ಭಾಗವಹಿಸುವರು ಎಂದು ತಿಳಿಸಿದರು.


ಸಿಎಎ, ಎನ್‌ಸಿಆರ್‌ ಸಂವಿಧಾನದ ಆಶಯಗಳಿಗೆ ಕೊಡಲಿ ಏಟು ನೀಡಲಿದೆ. ಕೇಂದ್ರ ಸರ್ಕಾರ ಇಂತಹ ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಸಾಮಾಜಿಕ ಅಸಮಾತೋಲನ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಜನವಿರೋಧಿ ಕಾಯ್ದೆಗಳನ್ನು ತರುವ ಬದಲು ದೇಶದ ಜನರಿಗೆ ಉದ್ಯೋಗ ಕಲ್ಪಿಸಿ, ಆರ್ಥಿಕ ಹೊರೆಯನ್ನು ತಗ್ಗಿಸಲಿ ಎಂದು ಸಲಹೆ ನೀಡಿದರು.

500 ಸ್ವಯಂ ಸೇವಕರ ನಿಯೋಜನೆ:

ಟ್ರಾಫಿಕ್‌ ನಿಯಂತ್ರಿಸಲು ಹಾಗೂ ಸಮಾವೇಶದಲ್ಲಿ ಭಾಗವಹಿಸುವವರಿಗೆ ಸಹಕಾರ ನೀಡುವ ಉದ್ದೇಶದಿಂದ 500 ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಮೈದಾನದ ಸುತ್ತಮುತ್ತ 5 ಎಲ್‌ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಚಿಕಿತ್ಸಾ ಕ್ಲಿನಿಕ್‌, ಅಂಬ್ಯುಲೆನ್ಸ್‌, ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ. ಪುರಭವನದ ಹತ್ತಿರ, ಅಮ್ಮಣ್ಣಿರಾಮಣ್ಣ ಸಭಾಭವನದ ಆವರಣ ಹಾಗೂ ಕ್ರಿಶ್ಚಿಯನ್‌ ಹೈಸ್ಕೂಲ್‌ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಮುಸ್ಲಿಮ್‌ ಒಕ್ಕೂಟದ ಅಧ್ಯಕ್ಷ ಯಾಸೀನ್‌ ಮಲ್ಪೆ ಮಾಹಿತಿ ನೀಡಿದರು.


ಸಮಾವೇಶದ ಪ್ರಧಾನ ಸಂಚಾಲಕ ರಮೇಶ್‌ ಕಾಂಚನ್‌ ಮಾತನಾಡಿ, ಸರ್ಕಾರ ತಪ್ಪು ನಿರ್ಣಯ ಕೈಗೊಂಡಾಗ ಅದರ ವಿರುದ್ಧ ಪ್ರತಿಭಟಿಸುವುದು ಪ್ರತಿಯೊಬ್ಬ ನಾಗರಿಕರ ಹಕ್ಕು. ಆದರೆ ಸಿಎಎ ವಿರೋಧಿಸಿ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಬಿಜೆಪಿ ಮುಖಂಡರು ಪೊಲೀಸ್‌ ಇಲಾಖೆಯ ಮೂಲಕ ತಡೆಯೊಡ್ಡುವ ಕೆಲಸ ಮಾಡಿದ್ದಾರೆ. ಅಲ್ಲದೆ, ಪರ್ಯಾಯ ಉತ್ಸವದಲ್ಲಿ ಸಿಎಎ ಪರವಾಗಿ ಬಿಜೆಪಿ ಪ್ರತಿಭಟನೆ ಮಾಡುವ ಮೂಲಕ ಪರ್ಯಾಯಕ್ಕೆ ಅಪಚಾರ ಎಸಗಿದೆ. ಧಾರ್ಮಿಕ ಕಾರ್ಯಕ್ರಮಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ, ವಿಲಿಯಂ ಮಾರ್ಟಿಸ್‌, ಬಾಲಕೃಷ್ಣ ಶೆಟ್ಟಿ, ಸುಂದರ್‌ ಮಾಸ್ತರ್‌, ಯಾಸೀನ್‌ ಮಲ್ಪೆ, ಶಶಿಧರ್‌ ಹೆಮ್ಮಾಡಿ, ವೆರೋನಿಕಾ ಕರ್ನೆಲಿಯೊ, ರೋಶನಿ ಒಲಿವೆರಾ ಇದ್ದರು.

Leave a Reply

Your email address will not be published. Required fields are marked *

error: Content is protected !!