ಉಡುಪಿ: ರಕ್ತದಾನ ಮೂಲಕ ಗಾಂಧಿ ಆಸ್ಪತ್ರೆ ಬೆಳ್ಳಿಹಬ್ಬ ಆಚರಣೆ
ಉಡುಪಿ: ಗುಣಮಟ್ಟದ ಆರೋಗ್ಯ ಸೇವೆಯನ್ನು ಕಳೆದ 25 ವರ್ಷಗಳಿಂದ ನೀಡುತ್ತಿರುವ ಇಲ್ಲಿನ ಪ್ರತಿಷ್ಠಿತ ಗಾಂಧಿ ಆಸ್ಪತ್ರೆ ರಜತ ಮಹೋತ್ಸವ ಸಂಭ್ರಮಾಚರಣೆಯಲ್ಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ರಕ್ತದಾನ ಮಾಡುವ ಮೂಲಕ ಮಂಗಳವಾರ ಆಚರಿಸಲಾಯಿತು.
ಗಾಂಧಿ ಆಸ್ಪತ್ರೆ ಮತ್ತು ಪಂಚಮಿ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಲಾದ ಕಾರ್‍ಯಕ್ರಮವನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಮಾಜಿ ಶಾಸಕ ಯು. ಆರ್. ಸಭಾಪತಿ, ಖ್ಯಾತ ಮನೋಚಿಕಿತ್ಸಕ ಡಾ.ಪಿ.ವಿ.ಭಂಡಾರಿ, ಮಕ್ಕಳ ತಜ್ಞ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು. ಪಂಚಮಿ ಟ್ರಸ್ಟ್‌ನ ಲಕ್ಷ್ಮಿ ಹರಿಶ್ಚಂದ್ರ, ಪಂಚಮಿ, ದಾಮೋದರ ಭಟ್ ಹಾಗೂ ಆಸ್ಪತ್ರೆಯ ಡಾ. ವಿದ್ಯಾ ತಂತ್ರಿ ಇದ್ದರು.
ಬಳಿಕ ಆಸ್ಪತ್ರೆಯ ಲಹರಿ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರ ಜಿಲ್ಲಾಸ್ಪತ್ರೆ ರಕ್ತನಿಧಿ ಮುಖ್ಯಸ್ಥೆ ಡಾ. ವೀಣಾಕುಮಾರಿ ನೇತೃತ್ವದಲ್ಲಿ ನಡೆದಿದ್ದು, ರಕ್ತದಾನಿಗಳಾದ ವಿಷ್ಣುಪ್ರಸಾದ ಪಾಡಿಗಾರು ಮತ್ತು ರಮೇಶ ಭಟ್ ಮತ್ತಿತರರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, 1995 ರ ಮೇ 5ರಂದು ಆರಂಭವಾದ ತಮ್ಮ ಸಂಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂಬ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ. ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಸಿಬಂದಿಗಳ ಸೇವೆ ಅದಕ್ಕೆ ಕಾರಣ. ಕಳೆದ 15 ವರ್ಷದಿಂದ ತಮ್ಮ ಆಸ್ಪತ್ರೆಯಲ್ಲಿ ನಿರಂತರವಾಗಿ ಪ್ರತೀ ವರ್ಷ ರಕ್ತದಾನ ನಡೆಸುವ ಮೂಲಕ ಜಿಲ್ಲಾ ರಕ್ತನಿಧಿಗೆ ಪ್ರತಿವರ್ಷವೂ ಸುಮಾರು 100 ಯೂನಿಟ್ ರಕ್ತ ನೀಡಲಾಗುತ್ತಿದೆ.
ಆಸ್ಪತ್ರೆಯ ರಜತ ಮಹೋತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ರಕ್ತದಾನದ ಮೂಲಕ ಆಚರಿಸಿ, ಜಿಲ್ಲೆಯ ಆಸ್ಪತ್ರೆಗಳ ರಕ್ತ ಕೊರತೆ ನೀಗಿಸುವಲ್ಲಿ ಶ್ರಮಿಸಲಾಗುತ್ತಿದೆ. ಆ ಮೂಲಕ ರಕ್ತ ಪಡೆದ ರೋಗಿಗಳ ಆರೋಗ್ಯ ಚೇತರಿಕೆಯ ಸಂತಸವೇ ತಮ್ಮ ಸಂತಸ ಎಂದು ಭಾವಿಸಲಾಗುತ್ತಿದೆ ಎಂದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ನಿರೂಪಿಸಿದರು. ಯೂಸುಫ್ ವಂದಿಸಿದರು.
ಕೊರೊನಾ ನಿಯಮಾವಳಿಗಳನ್ನು ಪಾಲಿಸಲಾಗಿತ್ತು. ವೈಯಕ್ತಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ಬಳಸಲಾಗಿತ್ತು. 130 ಮಂದಿ ರಕ್ತದಾನಿಗಳಿಂದ 130 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಅದನ್ನು ಜಿಲ್ಲಾ ರಕ್ತನಿಧಿಗೆ ನೀಡಲಾಯಿತು.
25 ಕ್ಕೂ ಅಧಿಕ ಬಾರಿ ರಕ್ತದಾನ
ಗಾಂಧಿ ಆಸ್ಪತ್ರೆಯಲ್ಲಿ ಇದುವರೆಗೆ 30 ಬಾರಿ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಸ್ವತಃ 25ಕ್ಕೂ ಅಧಿಕ ಬಾರಿ ರಕ್ತದಾನ ಮಾಡುವ ಮೂಲಕ ರಕ್ತದಾನಿಗಳು ಮತ್ತು ಸಿಬಂದಿಗಳಿಗೆ ಮಾದರಿಯಾಗಿದ್ದಾರೆ. ಇಂದೂ ಅವರು ರಕ್ತದಾನ ಮಾಡಿದರು.
ರಕ್ತ ಕೊರತೆ ನೀಗಿಸಲು ಪೂರಕ
ಜಿಲ್ಲಾ ರಕ್ತನಿಧಿ ನೇತೃತ್ವದಲ್ಲಿ ಗಾಂಧಿ ಆಸ್ಪತ್ರೆ ಈ ಹಿಂದಿನಿಂದಲೂ ರಕ್ತದಾನ ಶಿಬಿರ ಏರ್ಪಡಿಸಿ ರಕ್ತ ಸಂಗ್ರಹದಲ್ಲಿ ಸಹಕರಿಸುತ್ತಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿಯೂ ಜಿಲ್ಲೆಯ ರಕ್ತದಾನಿಗಳ ಸಹಕಾರದೊಂದಿಗೆ ಶಿಬಿರ ಏರ್ಪಡಿಸಿ ರಕ್ತ ಸಂಗ್ರಹದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಜಿಲ್ಲಾ ರಕ್ತನಿಧಿ ಮುಖ್ಯಸ್ಥೆ ಡಾ. ವೀಣಾಕುಮಾರಿ ಹೇಳಿದರು.