ಉಡುಪಿ: ಏ.1ರಿಂದ ಡಾ. ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ಕೊರೋನಾ ದೃಢ ಪಟ್ಟವರಿಗೆ ಚಿಕಿತ್ಸೆ

ಉಡುಪಿ: ಜಿಲ್ಲಾಡಳಿತ ಕರೋನಾ ವೈರಸ್ (ಕೋವಿಡ್ – 19) ಖಚಿತಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಏಪ್ರಿಲ್ 1ರಿಂದ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮೀಸಲಿಟ್ಟಿದೆಂದು ಜಿಲ್ಲಾಧಿಕಾರಿ ಮತ್ತು ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಸೋಮವಾರ ಘೋಷಿಸಿದರು.


ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು 100 ಹಾಸಿಗೆಗಳ ಆಸ್ಪತ್ರೆಯಾಗಿದ್ದು,11 ತೀವ್ರ ನಿಘಾ ಘಟಕ (ಐಸಿಯು) ಹಾಸಿಗೆಗಳು, 15 ಎಚ್‌ಡಿಯು (ಹೈ ಡೆಪೆಂಡೆನ್ಸಿ ಯುನಿಟ್) ಹಾಸಿಗೆಗಳು, 36 ಖಾಸಗಿ ಕೊಠಡಿಗಳಿವೆ ಇವುಗಳನ್ನು ಪ್ರತ್ಯೇಕ ಉದ್ದೇಶಕ್ಕಾಗಿ (ಐಸೋಲೇಷನ್) ಬಳಸಬಹುದು, ಜೊತೆಗೆ 43 ಸಾಮಾನ್ಯ ಹಾಸಿಗೆಗಳ ಸೌಲಭ್ಯವಿದೆ. ಕಸ್ತೂರ್ಬಾ ಆಸ್ಪತ್ರೆ ಮತ್ತು ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯರ ತಂಡ, ನರ್ಸಿಂಗ್, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗಳ ಸಮರ್ಪಿತ ತಂಡವು ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸಲಿದೆ.ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಪ್ರಸ್ತುತ 3 ಕರೋನಾ ವೈರಸ್ (ಕೋವಿಡ್ – 19) ಖಚಿತಗೊಂಡಿರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ, ಇವುಗಳನ್ನು ಉಡುಪಿಯ ಜಿಲ್ಲಾ ಅಸ್ಸ್ಪತ್ರೆಯಿಂದ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆಗಳಿಂದ ಸ್ವೀಕರಿಸಲಾಗಿದೆ.


ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ, ಉಡುಪಿ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕರೋನಾ ವೈರಸ್ (ಕೋವಿಡ್ – 19) ವಿರುದ್ಧದ ಸವಾಲುಗಳನ್ನು ಎದುರಿಸಲು ಸದಾ ಸಿದ್ಧವಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 3 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಂಡುಬರುವ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಈ
ಆಸ್ಪತ್ರೆಯನ್ನು ಬಳಸಲಾಗುವುದು, ಇಲ್ಲಿ ಜಿಲ್ಲೆಯಲ್ಲಿ ಪಾಸಿಟಿವ್ ಬಂದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು, ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಕರೋನಾ ರೋಗಿಗಳ ಸಮೀಪ ಸಂಪರ್ಕದಲ್ಲಿನ ವ್ಯಕ್ತಿಗಳಿಗಾಗಿ ಉದ್ಯಾವರದ ಎಸ್.ಡಿ.ಎಂ
ಕಾಲೇಜಿನಲ್ಲಿ 150 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ, ಅಗತ್ಯಬಿದ್ದಲ್ಲಿ ಜಿಲ್ಲೆಯಲ್ಲಿನ ಹಾಸ್ಟೆಲ್ ಗಳನ್ನು ಸಹ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಕರೋನಾ ಹರಡುವುದನ್ನು ತಡೆಗಟ್ಟಲು ಮತ್ತು ಅದರಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ಜಿಲ್ಲಾಡಳಿತದೊಂದಿಗೆ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) , ತನ್ನ ಇಡೀ ಆಸ್ಪತ್ರೆಯನ್ನು ಮೀಸಲಿಟ್ಟು , ಉಚಿತ ಚಿಕಿತ್ಸೆ ನೀಡಲು ಮುಂದೆ ಬಂದಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಮಾಹೆಯ ಉಪ ಕುಲಾಧಿಪತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!