ಉಡುಪಿ, ದ.ಕ. ಜಿಲ್ಲಾಯಾದ್ಯಾಂತ ಮೊಂತಿ ಹಬ್ಬದ ಸಂಭ್ರಮ
ಉಡುಪಿ: ಏಸುಕ್ರಿಸ್ತರ ತಾಯಿ ಕನ್ಯಾಮರಿಯಮ್ಮ ಹುಟ್ಟಿದ ದಿನವಾದ ಇಂದು ಉಡುಪಿ, ದ.ಕ. ಜಿಲ್ಲಾಯಾದ್ಯಾಂತ ಕ್ರೈಸ್ತರು ಮೊಂತಿ ಹಬ್ಬವನ್ನು ಭಕ್ತಿ ಭಾವ, ಸಂಭ್ರಮ ಸಡಗರದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಇಂದು ಉಡುಪಿ ಮಂಗಳೂರು ಧರ್ಮಪ್ರಾಂತ್ಯದ ಎಲ್ಲ ದೇವಾಲಯಗಳಲ್ಲಿ ಭಕ್ತರು ವಿಶೇಷ ಪ್ರಾರ್ಥನಾ ವಿಧಿಗಳ ಸಲ್ಲಿಸಿದರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಪಾಂಬೂರು ಹೋಲಿಕ್ರಾಸ್ ದೇವಾಲಯದಲ್ಲಿ ಪೂಜಾ ವಿಧಿಗಳ ನೇತೃತ್ವವನ್ನು ವಹಿಸಿದ್ದರು. ಪ್ರಮುಖವಾಗಿ ಶಿರ್ವ ದೇವಾಲಯದಲ್ಲಿ ವಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಡೆನ್ನಿಸ್ ಡೇಸಾ, ಉದ್ಯಾವರದಲ್ಲಿ ಧರ್ಮಪ್ರಾಂತ್ಯದ ಕುಲಪತಿ ವಂದನೀಯ ಫಾದರ್ ಸ್ಟ್ಯಾನಿ ಬಿ ಲೋಬೊ, ಉಡುಪಿಯಲ್ಲಿ ಫಾ. ವಲೇರಿಯನ್ ಮೆಂಡೋನ್ಸಾ ಸಹಿತ ವಿವಿಧ ದೇವಾಲಯಗಳಲ್ಲಿ ಹಲವಾರು ಧರ್ಮಗುರುಗಳು ಭಕ್ತರಿಗೆ ಆಶೀರ್ವಾದವನ್ನು ನೀಡಿದರು.
ಮಾತೆ ಮರಿಯಮ್ಮನವರಿಗೆ ಭಕ್ತಿಯಿಂದ ಮತ್ತು ಉತ್ಸಾಹದಿಂದ ಹೂವನ್ನು ಅರ್ಪಿಸುತ್ತಿದ್ದು ಎಲ್ಲ ದೇವಾಲಯಗಳಲ್ಲಿ ಕಂಡು ಬಂತು. ಪೂಜಾ ವಿಧಿಗಳ ಬಳಿಕ ಹಬ್ಬದ ಸಂತೋಷವನ್ನು ತಮ್ಮವರೊಂದಿಗೆ ಕ್ರೈಸ್ತ ಬಾಂಧವರು ವಿನಿಮಯ ಮಾಡಿಕೊಂಡರು. ಮೊಂತಿ ಹಬ್ಬದ ಪ್ರಯುಕ್ತ ಭಕ್ತರಿಗೆ ಕಬ್ಬುಗಳನ್ನು ವಿತರಿಸಲಾಗಿತ್ತು. ತೆನೆ ಹಬ್ಬವನ್ನು ಕುಟುಂಬದ ಹಬ್ಬವಾಗಿಯೂ ಆಚರಿಸಲಾಗುತ್ತಿದೆ. ಕುಟುಂಬದ ಸದಸ್ಯರು ಜೊತೆಯಾಗಿ ಊಟವನ್ನು ಮಾಡುವುದರ ಮೂಲಕ ಸಂತೋಷವನ್ನು ಆಚರಿಸುತ್ತಾರೆ.
ರೈತರು ಬೆಳೆದ ಈ ವರ್ಷದ ಮೊದಲ ಬೆಳೆಯಾದ ತೆನೆಯನ್ನು ಮನೆ ತುಂಬಿಸಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರಕೃತಿಮಾತೆಯನ್ನು ದೇವಮಾತೆಯನ್ನಾಗಿ ಈ ಹಬ್ಬದ ದಿನ ಕಾಣಲಾಗುತ್ತದೆ.
ತೆನೆ ಹಬ್ಬ ಎಂದು ಕರೆಸಿಕೊಳ್ಳುವ ಹಬ್ಬ ಬಂತೆಂದರೆ ಕ್ರಿಶ್ಚಿಯನ್ ಸಮುದಾಯದವರ ಪಾಲಿಗೆ ಸಂಭ್ರಮದ ದಿನ. ಈ ತೆನೆ ಹಬ್ಬದ ದಿನ ಚರ್ಚುಗಳಲ್ಲಿ ದಿವ್ಯ ಬಲಿಪೂಜೆಯನ್ನು ಭಕ್ತಿಯಿಂದ ನಡೆಸಿ, ಮಾತೆ ಮರಿಯಮ್ಮನಿಗೆ ವಿಜೃಂಭಣೆಯಿಂದ ಪುಷ್ಪ ಅರ್ಪಿಸಲಾಗುತ್ತದೆ.
ಸಾಮಾನ್ಯವಾಗಿ ಒಂಭತ್ತು ದಿನಗಳ ಕಾಲ ಈ ಹಬ್ಬದ ಆಚರಣೆ ಇರುತ್ತದೆ. ಹಬ್ಬದ ಒಂಭತ್ತು ದಿನಗಳ ಮುಂಚೆ ಕ್ರಿಶ್ಚಿಯನ್ ಸಮುದಾಯದವರು ಚರ್ಚುಗಳಿಗೆ ತೆರಳಿ ಮಾತೆ ಮರಿಯಮ್ಮನವರಿಗೆ ಪುಷ್ಪ ಅರ್ಚಣೆ ಮಾಡಿ ಭಕ್ತಿಯಿಂದ ಆರಾಧನೆ ಮಾಡುತ್ತಾರೆ.ಸತತ ಒಂಭತ್ತು ದಿನಗಳ ಕಾಲ ಮರಿಯಮ್ಮನವರನ್ನು ಭಕ್ತಿಯಿಂದ ಆರಾಧಿಸುವ ಕ್ರಿಶ್ಚಿಯನ್ ಸಮುದಾಯದವರಿಗೆ ಹಬ್ಬದ ಕೊನೆಯ ದಿನ ಅಂದರೆ ಮಾತೆಯ ಜನುಮ ದಿನದಂದು ಹೊಸ ಭತ್ತದ ತೆನೆಯನ್ನು ಚರ್ಚುಗಳಲ್ಲಿ ನೀಡಲಾಗುತ್ತದೆ.
ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಹೊಸ ಅಕ್ಕಿ ಊಟ ಮಾಡುವ ಮೂಲಕ ಹಬ್ಬದ ಊಟ ಸವಿಯುತ್ತಾರೆ. ಪೃಕೃತಿಮಾತೆಯು ನೀಡಿದ ಮೊದಲ ಫಲವನ್ನು ಕುಟುಂಬದ ಸದಸ್ಯರೆಲ್ಲರೂ ಜೊತೆಯಾಗಿ ಸೇವಿಸುವುದು ಈ ಹಬ್ಬದ ವಿಶೇಷವಾಗಿದೆ.