ಉಡುಪಿ: ಕೃಷಿ, ಮೀನುಗಾರಿಕೆ, ಸಣ್ಣ ಉದ್ಯಮಗಳಿಗೆ ಲಾಕ್ಡೌನ್ ನಿಂದ ವಿನಾಯಿತಿ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹ
ಉಡುಪಿ: ಸರಕಾರ ಮೇ.3ರವರೆಗೆ ಲಾಕ್‍ಡೌನ್ ಘೋಷಿಸಿರುವುದರಿಂದ ಗೇರುಬೀಜ ಸಂಸ್ಕರಣ ಘಟಕಗಳಿಗೆ ಈಗಾಗಲೇ ವಿನಾಯಿತಿ ನೀಡಲಾಗಿದೆ. ಅದೇ ರೀತಿ ಸಣ್ಣ ಕೈಗಾರಿಕೆಗಳಿಗೆ, ಕೃಷಿ ಸಂಬಂಧಿತ ಗುಡಿ ಕೈಗಾರಿಕೆಗಳು ಹಾಗೂ ಎಲ್ಲಾ ರೀತಿಯ ಸರಕು ಸಾಗಾಟಕ್ಕೆ ಕ್ರಯ ವಿಕ್ರಯಕ್ಕೆ ಅಲ್ಲದೆ ಮೀನುಗಾರಿಕೆ ಸಂಬಂಧಿತ ಎಲ್ಲಾ ಉದ್ಯಮಗಳಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮೀನುಗಾರಿಕೆ, ಕೃಷಿ ಸಂಬಂಧಿತ ಸಣ್ಣ, ಮಧ್ಯಮ ಕೈಗಾರಿಕೆಗಳ ವ್ಯವಹಾರವು ಎಪ್ರಿಲ್ ಮೇ ತಿಂಗಳಲ್ಲಿ ನಡೆಯುವುದರಿಂದ ನಂತರ ಮಳೆಗಾಲ ಆರಂಭವಾಗುವುದರಿಂದ ವರ್ಷದ ಆದಾಯದಿಂದ ವಂಚಿತವಾಗಿ ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಜೀವನ ದುಸ್ತರವಾಗುವುದು. ಈಗಾಗಲೇ ಕಳೆದ ಋತುವಿನಲ್ಲಿ ಮೀನಿನ ಕ್ಷಾಮ ನಿಮಿತ್ತ ನಷ್ಟದಲ್ಲಿರುವ ಉದ್ಯಮ ಅಲ್ಲದೆ ಪ್ರವಾಹ ನಿಮಿತ್ತ ಕೃಷಿ ಕ್ಷೇತ್ರದಲ್ಲಿ ರೈತರು ನಷ್ಟ ಅನುಭವಿಸಿದ್ದನ್ನು ಸ್ಮರಿಸುತ್ತೇನೆ. ಈ ಬಗ್ಗೆ ಈಗಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಜನ ಬೀದಿಗೆ ಬೀಳುವುದು ಖಚಿತ ಎಂದು ಕೊಡವೂರು ಅವರು ಅಭಿಪ್ರಾಯ ಪಟ್ಟಿದ್ದಾರೆ. |