ಉಡುಪಿ: ನಗರದ 3 ಮಾಲ್ ಗಳನ್ನು ಮುಚ್ಚುವಂತೆ ಆದೇಶಿಸಿದ ಡಿಸಿ

ಉಡುಪಿ: ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಸೂಚನೆಯಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ಯಾವುದೇ ಅಧಿಕಾರಿ/ಸಿಬ್ಬಂದಿಗಳಿಗೆ ಈ ಅವಧಿಯಲ್ಲಿ ರಜೆ ಮಂಜೂರು ಮಾಡದಂತೆ ಮತ್ತು ಜಿಲ್ಲಾಧಿಕಾರಿ, ಎಸ್ ಪಿಸಿಇಓ ಇವರ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಟ್ಟು ತೆರಳದಂತೆ ಹಾಗೂ ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.


ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೊರೋನ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಲಾಡ್ಜ್ ಗಳಲ್ಲಿರುವ ಪ್ರವಾಸಿಗರ ವಿವರಗಳನ್ನು ಪಡೆಯುವಂತೆ ಮತ್ತು ಪ್ಲಾಟ್‍ಗಳಿಗೆ ಹೊಸದಾಗಿ ಬರುವವರ ಮಾಹಿತಿ ಪಡೆದು ಅವರ ಸ್ವ-ಹೇಳಿಕೆ ಪಡೆಯುವಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.


ಜಿಲ್ಲೆಯಲ್ಲಿ ಮಾಸ್ಕ್‍ಗಳ ಕೊರತೆ ಸೃಷ್ಠಿಸುವುದು ಮತ್ತು ಅವುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಡಿಸಿ, ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗಾಗಿ 2 ಬೆಡ್‍ಗಳನ್ನು
ಕಾಯ್ದಿರಿಸುವಂತೆ ಹಾಗೂ ಜಿಲ್ಲೆಯ ಖಾಸಗಿ ವೈದ್ಯರು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ವಿದೇಶದಿಂದ ಬಂದು ರೋಗ ಲಕ್ಷಣಗಳು ಇರುವ ರೋಗಿಗಳಿದ್ದಲ್ಲಿ ಕೂಡಲೇ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್, ನಾಟಕಗಳು, ಯಕ್ಷಗಾನ, ರಂಗಮಂದಿರ, ಪಬ್‍ಗಳು, ಕ್ಲಬ್‍ಗಳು ಹಾಗೂ ನೈಟ್‍ಕ್ಲಬ್‍ಗಳನ್ನು ಸಂಪೂರ್ಣವಾಗಿ ಮುಚ್ಚುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ನಗರದ 3 ಮಾಲ್‍ಗಳನ್ನು ಮುಚ್ಚುವಂತೆ ಸೂಚಿಸಿ, ಈ ಪೈಕಿ ಬಿಗ್ ಬಜಾರ್‍ನ ದಿನಸಿ ಮತ್ತು ತರಕಾರಿ ವಿಭಾಗ, ಹಾಗೂ ಸಿಟಿ ಸೆಂಟರ್‍ನ ದಿನಸಿ ಮಳಿಗೆ ಹಾಗೂ ಕೆಳಗಿನ ಮಹಡಿಯಲ್ಲಿನ ಗ್ಯಾಸ್ ಏಜೆನ್ಸಿ ಹಾಗೂ ಅದರೊಂದಿಗಿನ 5 ಪ್ರತ್ಯೇಕ ಅಂಗಡಿಗಳನ್ನು ಮಾತ್ರ ತೆರೆಯುವಂತೆ ಸೂಚಿಸಿದರು. ಮದುವೆ, ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮಗಳು ಪೂರ್ವ ನಿಗಧಿಯಾಗಿದ್ದಲ್ಲಿ ಅಂತಹ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಜಾಸ್ತಿ ಜನರು ಸೇರದಂತೆ ಅಗತ್ಯ ಕ್ರಮ ವಹಿಸಲು ಮತ್ತು ಹೊಸದಾಗಿ ಮದುವೆ ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮಗಳಿಗೆ ಹಾಲ್‍ಗಳನ್ನು ಕಾಯ್ದಿರಿಸದಂತೆ ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರು.


ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯಬೇಕು, ಜಾತ್ರೆ, ಉತ್ಸವ ಇತ್ಯಾದಿ ಜನ ಸೇರುವ ಕಾರ್ಯಕ್ರಮಗಳನ್ನು ನಡೆಸದಂತೆ ಹಾಗೂ ಈಗಾಗಲೇ ನಿಗಧಿಯಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆದಷ್ಟು ಕಡಿಮೆ ಸಂಖ್ಯೆಯ ಜನರು ಭಾಗವಹಿಸುವಂತೆ ತಿಳಿಸಿದರು.ದೇವಸ್ಥಾನಗಳ ಯಕ್ಷಗಾನ ಮೇಳಗಳು ಹರಕೆ ಆಟಗಳನ್ನು ನಡೆಸುವಂತಿಲ್ಲ, ಈ ಬಗ್ಗೆ ಸಂಬಂದಿಸಿದ ದೇವಾಲಯಗಳಿಗೆ ಪತ್ರ ಬರೆಯುವಂತೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರ,

ಕೊಲ್ಲೂರು ದೇವಸ್ಥಾನದಲ್ಲಿ ಜಾತ್ರೆ ಇದ್ದು, ಕೇವಲ ಧಾರ್ಮಿಕ ಕಾರ್ಯಕ್ರಮವಾದ ರಥೋತ್ಸವ ಮಾತ್ರ ನಡೆಸುವಂತೆ ಹಾಗೂ ಈ ಕಾರ್ಯಕ್ರಮದಲ್ಲಿ ಹೊರಗಿನ ಜನ ಭಾಗವಹಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಹೆಚ್ಚಿನ ಸಂಖ್ಯೆಯ ಜನ ಸೇರುವ ಕ್ರಿಕೆಟ್, ಪುಟ್‍ಬಾಲ್, ವಾಲಿಬಾಲ್, ಹಾಕಿ, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್
ಪಂದ್ಯಾಟಗಳನ್ನು ಆಯೋಜಿಸದಂತೆ ಮತ್ತು ಇವುಗಳ ಆಯೋಜನೆಗೆ ಅನುಮತಿ ನೀಡದಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ಈಗಾಗಲೇ ಶಾಲೆ ಕಾಲೇಜುಗಳಿಗೆ ರಜೆ ನೀಡಿದ್ದು, ಯಾವುದೇ ಬೇಸಿಗೆ ಶಿಬಿರಗಳನ್ನು ಆಯೋಜಿಸದಂತೆ ಮತ್ತು ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಾಣಿಜ್ಯ ಶಾಲೆಗಳು, ಟ್ಯುಟೋರಿಯಲ್ಸ್ ಮತ್ತು ಕೋಚಿಂಗ್ ಕ್ಲಾಸ್‍ಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಮತ್ತು ಜನರು ಹೆಚ್ಚಾಗಿ ಬಳಸುವ ಸ್ವಿಮ್ಮಿಂಗ್ ಫೂಲ್, ಜಿಮ್,
ಫಿಟ್‍ನೆಸ್ ಸೆಂಟರ್ ಇತ್ಯಾದಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಕೊರೋನಾ ನಿಯಂತ್ರಣ ಕುರಿತಂತೆ, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಕೊರೋನಾ ಕಾಯಿಲೆ ಸಂಬಂದಿಸಿಂತೆ ಸಾರ್ವನಿಕರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಸಿ.ಇ.ಓ ಪ್ರೀತಿ ಗೆಹಲೋತ್, ಎಸ್.ಪಿ. ಎನ್.ವಿಷ್ಣುವರ್ಧನ್ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿ.ಎಚ್.ಓ ಡಾ. ಸುಧೀರ್‍ಚಂದ್ರ ಸೂಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

1 thought on “ಉಡುಪಿ: ನಗರದ 3 ಮಾಲ್ ಗಳನ್ನು ಮುಚ್ಚುವಂತೆ ಆದೇಶಿಸಿದ ಡಿಸಿ

  1. All medical clinics and private medical clinics are closed, please government make an ordered open all medical clinics and children clinics..

Leave a Reply

Your email address will not be published. Required fields are marked *

error: Content is protected !!