ಉಡುಪಿ: ಡಿ. 22ರಂದು ಬಡಗಬೆಟ್ಟು ಸೊಸೈಟಿಯ ಶತಮಾನೋತ್ಸವ ಸಮಾರೋಪ
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ-–ಆಪರೇಟಿವ್ ಸೊಸೈಟಿಯ ಶತಮಾನೋತ್ಸವ
ಸಂಭ್ರಮಾಚರಣೆಯ ಸಮಾರೋಪ ಸಮಾರಂಭ ಡಿ. 22ರಂದು ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮಾರಂಭವನ್ನು ಉದ್ಘಾಟಿಸುವರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಸಿಎಸ್‌ಐ ಕರ್ನಾಟಕ ಸದರ್ನ್ ಡಯಾಸಿಸ್ ಕೋಶಾಧಿಕಾರಿ ವಿನ್ಸೆಂಟ್ ಪಾಲನ್ನ, ಧರ್ಮಗುರು ಮೊಹಮ್ಮದ್ ಹನೀಪ್ ಮದಾನಿ ಆಶೀರ್ವಚನ ನೀಡುವರು ಎಂದರು.
ಶಾಸಕರಾದ ಲಾಲಾಜಿ ಆರ್. ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಚಿವರಾದ
ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಜೆ 4 ಗಂಟೆಗೆ ನಡೆಯುವ ಸಮಾರೋಪದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ
ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ ನೀಡುವರು ಎಂದು ಹೇಳಿದರು.
ಶತಮಾನ ಸಂಭ್ರಮಾಚರಣೆಯ ಸ್ಮರಣ ಸಂಚಿಕೆಯನ್ನು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸುವರು. ಶಾಸಕ ರಘುಪತಿ ಭಟ್, ಮಾಜಿ ಸಚಿವ ಅಮರನಾಥ ಶೆಟ್ಟಿ ಮೊದಲಾದವರು ಭಾಗವಹಿಸುವರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ಡಿ. 21ರಂದು ಸಂಜೆ 4 ಗಂಟೆಗೆ ಸಂವಾದ, ಪೌರ ಕಾರ್ಮಿಕರು, ಲೈನ್‌ಮ್ಯಾನ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮತ್ತು ಆರ್ಥಿಕ ಸಹಾಯಧನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸಾಂಸ್ಕೃತಿಕ ವೈಭವ
ಡಿ. 22ರಂದು ಬೆಳಿಗ್ಗಿನ ಸಭಾ ಕಾರ್ಯಕ್ರಮದ ಬಳಿಕ ತೆಂಕು ಹಾಗೂ ಬಡಗುತಿಟ್ಟಿನ
ಕಲಾವಿದರ ಕೂಡುವಿಕೆಯಲ್ಲಿ ‘ಭೀೀಷ್ಮ ವಿಜಯ’ ಯಕ್ಷಗಾನ ಕೂಡಾಟ ಹಾಗೂ ಸಂಜೆ ಸಮಾರೋಪದ ಬಳಿಕ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 300 ವಿದ್ಯಾರ್ಥಿಗಳ ತಂಡದಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ತಿಳಿಸಿದರು.
ಸಂಘದ ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ , ಸಂಘದ ಉಪಾಧ್ಯಕ್ಷ ಎಲ್. ಉಮಾನಾಥ ಪತ್ರಿಕಾಗೋಷ್ಠಿಯಲ್ಲಿ ಇದ್ದರು.