ಉಡುಪಿ ಗ್ರೀನ್ ಝೋನ್‌ಗೆ ಬಂದ ಬಳಿಕ ನಿರ್ಬಂಧ ಸಡಿಲಿಕೆ: ಸಚಿವ ಬೊಮ್ಮಾಯಿ
ಉಡುಪಿ: ಉಡುಪಿ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಬಂದ ಬಳಿಕ ರಾಜ್ಯದ 11 ಗ್ರೀನ್‌ಝೋನ್ ಜಿಲ್ಲೆಗಳಿಗೆ ನೀಡಿರುವ ವಿನಾಯಿತಿಯನ್ನು ನೀಡುವ ಬಗ್ಗೆ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಸೋಂಕು ಹರಡುವಿಕೆ ತಡೆ ಸಂಬಂಧ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಲಾಕ್‌ಡೌನ್ ಅವಧಿ ಮುಗಿದ ಬಳಿಕ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತುರ್ತು ಚಿಕಿತ್ಸೆಗೆ ಉಡುಪಿಗೆ ಬರುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ಸೋಂಕು ಹರಡುವ ಅಪಾಯವಿದ್ದು, ತುರ್ತು ಚಿಕಿತ್ಸೆಗೆ ಐದಕ್ಕಿಂತ ಹೆಚ್ಚು ಮಂದಿ ಒಟ್ಟಾಗಿ ಬರುವಂತಿಲ್ಲ ಎಂಬ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲೆಯ ಸ್ಥಳೀಯ ಕಸುಬುಗಳ ಆರಂಭಕ್ಕೆ ಒತ್ತು, ಮೀನುಗಾರಿಕೆಗೆ ಇರುವ ತೊಂದರೆಗಳನ್ನು ನಿವಾರಿಸಲಾಗುವುದು. ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿವೆ. ಗ್ರೀನ್‌ಝೋನ್ ಜಾರಿ ಬಳಿಕ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು ಎಂದರು.
ಆರೋಗ್ಯ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆಗಳನ್ನು ಸರ್ಕಾರ ಗಂಭೀರವಾಗಿ ತಗೆದುಕೊಂಡಿದೆ. ಪಡುಬಿದ್ರಿ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕರ್ತೆಯನ್ನು ನಿಂಧಿಸಿರುವ ವಿಚಾರ ಗಮನಕ್ಕೆ ಬಂದಿದೆ. ಘಟನೆಯ ಬಗ್ಗೆ ಎಸ್‌ಪಿ ಬಳಿ ಮಾಹಿತಿ ಪಡೆದು ತಪ್ಪು ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಸಚಿವ ಬೊಮ್ಮಾಯಿ ಭರವಸೆ ನೀಡಿದರು.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ ಕನಿಷ್ಠ 50 ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 10 ಕೇಂದ್ರೀಕೃತ ಆಮ್ಲಜನಕ ಪೂರೈಕೆ ವ್ಯವಸ್ಥೆ ಹೊಂದಿರುವ ಬೆಡ್‌ಗಳನ್ನು ನಿರ್ಮಿಸಲಾಗುವುದು. ತುರ್ತು 3500 ಪಿಪಿಇ ಕಿಟ್‌ಗಳನ್ನು ಒದಗಿಸುವಂತೆ ಔಷಧ ನಿಯಂತ್ರಣ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಯೋಗಾಲಯ:
ಜಿಲ್ಲೆಯಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಲಭ್ಯವಿದ್ದರೂ ಕೋವಿಡ್ ಪರೀಕ್ಷೆಗೆ ಅನ್ಯ ಜಿಲ್ಲೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಜಿಲ್ಲೆಯಿಂದ ಕಳುಹಿಸಿದ ವರದಿಗಳು ತಡವಾಗುತ್ತಿರುವ ಬಗ್ಗೆ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್, ಎಸ್‌ಪಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಇದ್ದರು.