ಉಡುಪಿ: ಹನ್ನೆರಡು ವರ್ಷದಲ್ಲಿ7,752 ಹೆಚ್ಐವಿ ಸೋಂಕಿತ ಪ್ರಕರಣ ಪತ್ತೆ

ಉಡುಪಿ: ಜಿಲ್ಲೆಯಲ್ಲಿನ ಹೆಚ್‍ಐವಿ ಸೋಂಕಿತರಿಗೆ ರಾಜೀವ ಗಾಂಧಿ ವಸತಿ ನಿಗಮದ
ಸಹಯೋಗದಲ್ಲಿ ವಸತಿ ಕಲ್ಪಿಸಲು ಅವಕಾಶವಿದ್ದು, ಅವರಿಗೆ ಆದ್ಯತೆಯ ಮೇರೆಗೆ ನಿವೇಶನ ಒದಗಿಸಲು ಸಂಬಂದಪಟ್ಟ ಇಲಾಖೆಗಳು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲ್ಲೋತ್ ಸೂಚಿಸಿದ್ದಾರೆ.
ಅವರು ಸೋಮವಾರ, ಜಿಲ್ಲಾ ಪಂಚಾಯತ್ ತಮ್ಮ ಕಚೇರಿಯಲ್ಲಿ ನಡೆದ, ಹೆಚ್‍ಐವಿ ಸೋಂಕಿತರಿಗೆ ವಿವಿಧ ಇಲಾಖೆಗಳಿಂದ ಸೌಲಭ್ಯಗಳನ್ನು ಒದಗಿಸಿರುವ ಕುರಿತ, ಸಾಮಾಜಿಕ ಸವಲತ್ತುಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ರಾಜೀವ ಗಾಂಧೀ ವಸತಿ ನಿಗಮದಲ್ಲಿ ಹೆಚ್‍ಐವಿ ಸೋಂಕಿತರಿಗೆ ವಸತಿ ಒದಗಿಸಲು ಅವಕಾಶವಿದ್ದರೂ ಸಹ ಜಿಲ್ಲೆಯಲ್ಲಿ 2014-15 ರಲ್ಲಿ ನಿಗಮದಿಂದ 162 ಗುರಿ ನೀಡಿದ್ದು, 36 ಮಂದಿಗೆ ಮಾತ್ರ ವಸತಿ ಸೌಲಭ್ಯ ಒದಗಿಸಲಾಗಿದೆ, 2016-17 ರಲ್ಲಿ 20 ಗುರಿ ಇದ್ದು 9 ಮಂದಿಗೆ ಸೌಲಭ್ಯ ಒದಗಿಸಲಾಗಿದೆ, 2017-18 ರಲ್ಲಿ 33 ಗುರಿ ಇದ್ದು 4 ಮಂದಿಗೆ ಸೌಲಭ್ಯ ಒದಗಿಸಲಾಗಿದೆ, ವಸತಿ ಕಲ್ಪಿಸಲು ಗುರಿ ಇದ್ದರೂ ಸಹ ನಿವೇಶನ ಇಲ್ಲದ ಕಾರಣ ಅವರಿಗೆ ವಸತಿ ಸೌಲಭ್ಯ ಒದಗಿಸಲು ತೊಂದರೆಯಾಗಿದೆ, ಆದ್ದರಿಂದ ಜಿಲ್ಲೆಯಲ್ಲಿನ ಹೆಚ್‍ಐವಿ ಸೋಂಕಿತರಿಗೆ , ಸಂಬಂದಪಟ್ಟ ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿ ಹಗೂ ತಹಸೀಲ್ದಾರರ ಮೂಲಕ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಇಓ ಸೂಚಿಸಿದರು.


ಜಿಲ್ಲೆಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ 2008 ರಿಂದ ಜನವರಿ 2020 ರ ವರೆಗೆ ಒಟ್ಟು 4,00,386 ಪ್ರಕರಣಗಳನ್ನು ಪರೀಕ್ಷಿಸಲಾಗಿದ್ದು, 7,752 ನೊಂದಾಯಿತ ಹೆಚ್‍ಐವಿ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, ಗರ್ಭಿಣಿಯರಲ್ಲಿ 245 ಹೆಚ್‍ಐವಿ ಪಾಸಿಟಿವ್, 203 ಹೆಚ್‍ಐವಿ ಸೋಂಕಿತ ಮಕ್ಕಳು ಹಾಗೂ7 ಮಂಗಳ ಮುಖಿಯಲ್ಲಿ ಹೆಚ್‍ಐವಿ ಸೋಂಕು ಪ್ರಕರಣ ದಾಖಲಾಗಿರುವ ಕುರಿತು ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು. ಆರ್‍ಟಿಓ ಹಾಗೂ ಕೆನರಾ ಬಸ್ ಮಾಲಕ ಸಂಘದ ಸಹಕಾರದಿಂದ ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳಲ್ಲಿ ಹೆಚ್‍ಐವಿ ಸೋಂಕಿತರಿಗೆ ಶೇ. 50 ರಿಯಾಯತಿ ದರದ ಬಸ್ ಪಾಸ್ ಕಲ್ಪಿಸಲಾಗಿದೆ.

2010 ರಿಂದ 2016 ಮಾರ್ಚ್ 31 ರ ವರೆಗೆ 636 ಅರ್ಜಿಗಳು ಬಂದಿದ್ದು, ಎಲ್ಲಾ ಫಲಾನುಭವಿಗಳು ಬಸ್‍ಪಾಸ್ ಸೌಲಭ್ಯವನ್ನು ಪಡೆದಿದ್ದಾರೆ. 2016 ರಿಂದ 2017 ರಲ್ಲಿ 27 ಅರ್ಜಿ ಬಂದಿದ್ದು, ಎಲ್ಲಾ ಫಲಾನುಭವಿಗಳು ಬಸ್‍ಪಾಸ್ ಸೌಲಭ್ಯವನ್ನು ಪಡೆದಿದ್ದಾರೆ. 2017 ರಿಂದ 2018 ರಲ್ಲಿ 45 ಅರ್ಜಿಗಳಲ್ಲಿ 19 ಫಲಾನುಭವಿಗಳು ಬಸ್‍ಪಾಸ್ ಸೌಲಭ್ಯವನ್ನು ಪಡೆದಿದ್ದಾರೆ. 2018 ರಿಂದ 2019 ರಲ್ಲಿ 53 ಅರ್ಜಿ ಬಂದಿದ್ದು, ಎಲ್ಲಾ ಫಲಾನುಭವಿಗಳು ಬಸ್‍ಪಾಸ್ ಸೌಲಭ್ಯವನ್ನು ಪಡೆದಿದ್ದಾರೆ.


2019 ರಿಂದ 2020 ಯಲ್ಲಿ 54 ಅರ್ಜಿಗಳು ಬಂದಿದ್ದು, 27 ಫಲಾನುಭವಿಗಳು ಬಸ್‍ಪಾಸ್ ಸೌಲಭ್ಯವನ್ನು ಪಡೆದಿರುವ ಕುರಿತು ಮಾಹಿತಿ ಪಡೆದ ಸಿಇಓ ಅವರು ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರದಲ್ಲಿ ಪರಿಗಣಿಸಿ ಫಲಾನುಭವಿಗಳಿಗೆ ನೀಡುವಂತೆ
ಸೂಚಿಸಿದರು. ಹೆಚ್‍ಐವಿ ಸೋಂಕಿತ ಮತ್ತು ಭಾದಿತ ಮಕ್ಕಳಿಗೆ ಉಡುಪಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕ ಅಡಿಯಲ್ಲಿ ಸಿಗುವ ವಿಶೇಷ ಪಾಲನಾ ಯೋಜನಾ ವರದಿಯನ್ನು ಅಧಿಕಾರಿಗಳಿಂದ ಪಡೆದ ಅವರು, 2012 ರಿಂದ ಪ್ರಸಕ್ತ ಸಾಲಿನ ವರೆಗಿನ ವರದಿಯನ್ನು ಸಮಗ್ರವಾಗಿ ದಾಖಲಿಸುವಂತೆ ಸೂಚಿಸಿದರು.

,

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಧನ ಶ್ರೀ ಯೋಜನೆಯಡಿ ಮಹಿಳಾ ಅಭಿವೃದ್ಧಿ ನಿಗಮದಿಂದ ಹೆಚ್‍ಐವಿ ಸೋಂಕಿತ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ತರಬೇತಿಯನ್ನು ನೀಡಿ ಶೇ. 50 ಸಬ್ಸಿಡಿಯ ಸಾಲವನ್ನು ನೀಡಲಾಗುತ್ತಿದೆ.
2019-20 ರಲ್ಲಿ ಈ ಯೋಜನೆಯಡಿ 21 ಗುರಿ ನೀಡಿದ್ದು, 19 ಫಲಾನುಭವಿಗಳಿಗೆ ಸೌಲಭ್ಯ ದೊರೆತಿದ್ದು, ಈ ಯೋಜನೆಯ ಸೌಲಭ್ಯ ಎಲ್ಲಾ ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂದು ಪ್ರೀತಿ ಗೆಹಲೋತ್ ತಿಳಿಸಿದರು. ಜಿಲ್ಲೆಯಲ್ಲಿನ ಹೆಚ್‍ಐವಿ ಸೋಂಕಿತ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಹೈಜಿನ್ ಕಿಟ್ ಒದಗಿಸಲಾಗುತ್ತಿದ್ದು, 2019-2020
ರಲ್ಲಿ ಸ್ವಯಂ ಸೇವಾ ಸಂಘಟನೆಗಳ ಸಹಕಾರದಿಂದ ಮಕ್ಕಳಿಗೆ ಸಿರಪ್‍ಗಳನ್ನು ಒದಗಿಸಲಾಗುತ್ತಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹೆಚ್‍ಐವಿ ಸೋಂಕಿತರಿಗೆ ಉಚಿತ ಕಾನೂನು ಸೇವೆಗಳನ್ನು ಒದಗಿಸಲಾಗುತ್ತಿದೆ.


ಜಿಲ್ಲೆಯಲ್ಲಿ ಉಡುಪಿ ಹಾಗೂ ಕುಂದಾಪುರದಲ್ಲಿ ಎಆರ್‍ಟಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿರುವ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದ ಸಿಇಓ, ಹೆಚ್‍ಐವಿ ಸೋಂಕಿತರಿಗೆ ಜಿಲ್ಲಾ ಆಸ್ಪತ್ರೆಯಿಂದ ಒದಗಿಸುವ ಸಿಡಿ 4 ಹಾಗೂ ವೈರಲ್ ಲೋಡ್ ಪರೀಕ್ಷೆ, ಆಯುಷ್ಮಾನ್ ಕಾರ್ಡ್ ವಿತರಣೆ, ಎರಡನೇ ಹಂತದ ಎಆರ್‍ಟಿ ಮತ್ತು ಮಕ್ಕಳಿಗೆ ಟ್ರಾವೆಲಿಂಗ್ ಅನುದಾನ ಒದಗಿಸುವಿಕೆ ಹಾಗೂ ಉಚಿತ ಎಆರ್‍ಟಿ ಔಷಧ ಮತ್ತು ಲ್ಯಾಬ್ ಸರ್ವೀಸಸ್, ಉಚಿತ ಪೂರಕ ಔಷಧಗಳ ಬಗ್ಗೆ ವಿವರ ಪಡೆದರು.


ಹೆಚ್‍ಐವಿ ಸೋಂಕಿತ ತಂದೆ-ತಾಯಿಗೆ ಹುಟ್ಟಿದ ಮಕ್ಕಳಿಗೆ ಆರ್‍ಟಿಇ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಮತ್ತು ಹೆಚ್‍ಐವಿ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಶೇ. 50 ರಿಯಾಯತಿ ಪಾಸ್ ಸೌಲಭ್ಯವನ್ನು
ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಪ್ರೀತಿ ಗೆಹಲ್ಲೋತ್ ಅವರಿಗೆ ತಿಳಿಸಿದರು.
ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಜಿಲ್ಲೆಯಲ್ಲಿನ ಹೆಚ್‍ಐವಿ ಸೋಂಕಿತ ಅಗತ್ಯವಿರುವ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಪ್ರೀತಿ ಗೆಹಲ್ಲೋತ್ ಹೇಳಿದರು.


ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯ ಉಪ ನಿರ್ದೇಶಕ
ಶೇಷಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!