ಉಡುಪಿ: ಗ್ರೀನ್ ಝೋನ್ ಗೆ ಅಡ್ಡಿಯಾದ ಖರ್ಜೂರ ಲಾರಿಯಲ್ಲಿನ ಪಯಣ?
ಉಡುಪಿ: ಮುಂಬೈಯಿಂದ ಮಂಡ್ಯಕ್ಕೆ ಖರ್ಜೂರ ಲಾರಿಯಲ್ಲಿ ತೆರಳಿದ್ದ ಕೋವಿಡ್ 19 ಸೋಂಕಿತ ವ್ಯಕ್ತಿ ತೆಕ್ಕಟ್ಟೆ ಪೆಟ್ರೋಲ್ ಬಂಕ್‌ನಲ್ಲಿ ಸಂಪರ್ಕಕ್ಕೆ ಬಂದಿರುವುದು ಖಚಿತವಾಗುತ್ತಿದ್ದಂತೆ ಈ ಪೆಟ್ರೋಲ್ ಬಂಕ್‌ನ್ನು ಸೀಲ್ ಡೌನ್ ಮಾಡಲು ಜಿಲ್ಲಾಧಿಕಾರಿ ಜಿ. ಜಗದೀಶ್ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.
ಮುಂಬೈಯಿಂದ ಎ. 22 ರಂದು ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಬಂದಿದ್ದ ಸೋಂಕಿತನಿಂದ ಎ. 24 ರಂದು ಇವರ ಗಂಟಲುದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ 19 ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಮಂಡ್ಯ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಎ. 20 ರಂದು ಮುಂಬೈಯಿಂದ ಲಾರಿಯಲ್ಲಿ ಹೊರಟ ಈತ ಮರವಂತೆಯ
ತೆಕ್ಕಟ್ಟೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಪೆಟ್ರೋಲ್ ಬಂಕ್ ಬಳಿ ಸ್ನಾನ ಮಾಡಿ, ನಂತರ ಅಲ್ಲೇ ಪಕ್ಕದ ಹೊಟೇಲ್ ನಲ್ಲಿ ಊಟವನ್ನೂ ಮಾಡಿದ್ದ ಎಂದು ತಿಳಿದುಬಂದಿದೆ.
ಪೆಟ್ರೋಲ್ ಬಂಕ್ ಮತ್ತು ಊಟದ ವೇಳೆ ಎಷ್ಟು ಜನ ಸೆಕಂಡರಿ ಸಂಪರ್ಕಕ್ಕೆ ಬಂದಿದ್ದಾರೋ ಅವರೆಲ್ಲರನ್ನು ಕ್ವಾರಂಟೈನ್‌ನಲ್ಲಿರಿಸಲು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
28 ದಿನಗಳಿಂದ ಯಾವುದೇ ಕೋವಿಡ್ 19 ಪಾಸಿಟಿವ್ ಪ್ರಕರಣ ಇಲ್ಲದ ಉಡುಪಿ ಜಿಲ್ಲೆಯ ಸಾಧನೆಗೆ ಸೋಂಕಿತನ ತೆಕ್ಕಟ್ಟೆ ಸಂಪರ್ಕ ಜಿಲ್ಲಾಡಳಿತಕ್ಕೆ ತಲೆನೋವು ತರುವಂತಾಗಿದೆ. ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದರೂ ಅವಶ್ಯ ಸಾಮಗ್ರಿಗಳ ಸಾಗಣೆ ವಾಹನಗಳಿಗೆ ಅವಕಾಶಕೊಟ್ಟಿರುವುದನ್ನು ದುರುಪಯೋಗಪಡಿಸಿಕೊಂಡು ಇಂತಹ ವ್ಯಕ್ತಿಗಳು ಒಳ ನುಸುಳಿರುವುದು ದೃಢಪಟ್ಟಿದೆ. ಆದ್ದರಿಂದ ಹಸಿರು ವಲಯ ಘೋಷಣೆಯಾದರೂ ಬಹಳ ಕಟ್ಟೆಚ್ಚರ ವಹಿಸಬೇಕಾಗಿದೆ.
ಸೋಮವಾರ ಸಂಜೆ ಇಲ್ಲಿನ ಪೆಟ್ರೋಲ್ ಬಂಕ್ ನಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.
ಒಂದು ವೇಳೆ ಆತ ಇಲ್ಲಿಯೇ ಸ್ನಾನ ಮಾಡಿರುವುದು ಖಾತ್ರಿಯಾದರೆ, ಪೆಟ್ರೋಲ್ ಬಂಕ್ ನ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಯನ್ನು ಕಂಟೋನ್ಮಂಟ್ ವಲಯವೆಂದು ಘೋಷಿಸಿ, ಸೀಲ್ ಡೌನ್ ಮಾಡಲು ಡಿಸಿಯವರು ಆದೇಶಿಸಿದ್ದಾರೆ. ಜತೆಗೆ ಪೆಟ್ರೋಲ್ ಬಂಕ್ ನ ಎಲ್ಲ ಸಿಬಂದಿಯನ್ನು ಹಾಗೂ ಆ ದಿನ ಶಿರೂರು ಗಡಿ ಮತ್ತು ಸಾಸ್ತಾನ ಚೆಕ್ ಪೋಸ್ಟನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲರನ್ನು ಕೂಡ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸುವ ಸಾಧ್ಯತೆಯಿದೆ.