ಕೈಗೆಟುಕದ ಸರಕಾರದ ಸಹಾಯಧನ, ಆಟೋ ಚಾಲಕರ ಕೂಗು ಕೇಳುವರ್ಯಾರು…?

ಉಡುಪಿ (ಉಡುಪಿ ಟೈಮ್ಸ್ ವರದಿ) :ಕೊರೊನಾದಿಂದಾಗಿ ಸಂಕಷ್ಟಕ್ಕೀಡಾಗಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನೆರವಾಗುವುದಕ್ಕಾಗಿ ಸರಕಾರವು ಪ್ಯಾಕೇಜ್‌ ಘೋಷಿಸಿದೆ. ಪ್ರತೀ ಆಟೋ, ಟ್ಯಾಕ್ಸಿ ಚಾಲಕರಿಗೆ 5,000 ರೂ. ಪರಿಹಾರದ ಪ್ಯಾಕೇಜನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ್ದರು.

ಇದು ಘೋಷಣೆ ಯಾಗಿ ಮೂರು ತಿಂಗಳು ಕಳೆದರೂ ಉಡುಪಿ ಜಿಲ್ಲೆಯ ಶೇ. 80ರಷ್ಟು ಚಾಲಕರಿಗೆ ಈ ಮೊತ್ತ ಲಭ್ಯವಾಗಿಲ್ಲ. ವಿಶೇಷ ಎಂದರೆ ದಿನದ ಬಾಡಿಗೆಯನ್ನೇ ನಂಬಿರುವ ಈ ವರ್ಗಕ್ಕೆ ಯಾವುದೇ ಅಧಿಕಾರಿ ವರ್ಗ ಕನಿಷ್ಠ ಮಾರ್ಗದರ್ಶನ ನೀಡುವ ಸಹಾಯವನ್ನೂ ಮಾಡಲಿಲ್ಲ. ಪ್ಯಾಕೇಜ್‌ ಘೋಷಿಸಿರುವ ಸರಕಾರವೇ ಚಾಲಕರಿಗೆ ಒದಗಿಸಲಿ ಎಂಬ ಅಧಿಕಾರಿಗಳ ಅಸಡ್ಡೆಯೇ ದೊಡ್ಡ ಸಂಖ್ಯೆಯ ಚಾಲಕರಿಗೆ ಪ್ಯಾಕೇಜ್‌ ಸೌಲಭ್ಯ ತಲುಪದಿರಲು ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಉಭಯ ಜಿಲ್ಲೆಗಳಲ್ಲಿ ಸುಮಾರು 51 ಸಾವಿರ ಟ್ಯಾಕ್ಸಿ / ರಿಕ್ಷಾ ಚಾಲಕರಿದ್ದು, 26,000 ಮಂದಿ ಸೇವಾಸಿಂಧು ಮುಖೇನ ಅರ್ಜಿ ಸಲ್ಲಿಸಿದ್ದಾರೆ. 6 ಸಾವಿರ ಮಂದಿಯ ಖಾತೆಗೆ ಹಣ ಬಂದಿದೆ.


ಸಮಸ್ಯೆಗಳಿಗೆ ಹಲವಾರು ಕಾರಣಗಳು : ಸರಿಯಾದ ಮಾಹಿತಿ ಕೊರತೆಯ ನಡುವೆ ಅಂತಿಮ ದಿನಾಂಕ ಮುಗಿದಿರುವುದು, ಬ್ಯಾಡ್ಜ್ ಇದ್ದವರಿಗೆ ಮಾತ್ರ ಎಂಬ ಆರಂಭಿಕ ಸೂಚನೆ ಬ್ಯಾಡ್ಜ್ ಇಲ್ಲದವರಿಗೂ ಒದಗಿಸುವ ಭರವಸೆ ಈಡೇರಿಲ್ಲ ,ಸಂದೇಹ ಬಗೆಹರಿಸಲು ಸಹಾಯವಾಣಿ ವಿಫ‌ಲವಾಗಿರುವುದರಿಂದ ಬ್ಯಾಡ್ಜ್ ಹೊಂದಿದ ಚಾಲಕರು ಮಾತ್ರ ಸಹಾಯಧನಕ್ಕೆ ಅರ್ಹರು ಎಂಬುದು ರಾಜ್ಯ ಸರಕಾರ ಮೊದಲು ಹೊರಡಿಸಿದ ಸೂಚನೆ. ಇದಕ್ಕೆ ಚಾಲಕರಿಂದ ಆಕ್ಷೇಪ ವ್ಯಕ್ತವಾಗಿತ್ತು.

ಬಳಿಕ ಈ ಬಗ್ಗೆ ಪರಾಮರ್ಶಿಸಿ ಬ್ಯಾಡ್ಜ್ ಇಲ್ಲದಿರುವ ಆಟೋ ಚಾಲಕರಿಗೂ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ. ಸೇವಾ ಸಿಂಧುವಿನಡಿ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿತ್ತು. ತಾಂತ್ರಿಕ ಸಮಸ್ಯೆಗಳ ಜತೆಗೆ ಗ್ರಾಮೀಣ ಭಾಗಗಳಲ್ಲಿ ಮಾಹಿತಿ ಕೊರತೆಯಿಂದಾಗಿ ಅನೇಕ ಆಟೋ/ ಕ್ಯಾಬ್‌ ಚಾಲಕರಿಗೆ ಅರ್ಜಿ ಸಲ್ಲಿಕೆಯೇ ಸಾಧ್ಯವಾಗಿರಲಿಲ್ಲ.


ಮಿತಿ ಮೀರಿದ ನಿಯಮಗಳು : ಮಿತಿ ಮೀರಿದ ನಿಯಮಗಳಿಂದ ಕೇವಲ 25 % ಜನರಿಗೆ ಮಾತ್ರ ಇದರ ಲಾಭ ಆಗಿದೆ. ಐದು -ಆರು ಆಟೋ ಹೊಂದಿದವರಿಗೆ ಒಬ್ಬರಿಗೆ ಈ ಧನ ಸಹಾಯ ಮಾಡಿದ್ದಾರೆ. ಆಟೋವನ್ನು ದಿನದ ಬಾಡಿಗೆಗೆ ತೆಗೆದುಕೊಂಡು ಹೋಗುವ ಚಾಲಕರಿಗೆ ಇದರಿಂದ ಲಾಭ ಏನು?. ದಯವಿಟ್ಟು ಸರಕಾರ ಮಿತಿ ಮೀರಿದ ನಿಯಮಗಳಿಂದ‌ ಚಾಲಕರು ಸಂಕಷ್ಟ್ಟಕ್ಕೆ ಒಳಗಾಗಿದ್ದಾರೆ. ನಿಯಮ ಸ್ವಲ್ಪ ಸಡಿಲಿಸಿದ್ದಲ್ಲಿ ಜನರಿಗೆ ಸಹಾಯ ದೊರೆಯಬಹುದು ಎಂದು, ಯಶೋಧ ಆಟೋ ಯೂನಿಯನ್ ಅಧ್ಯಕ್ಷರಾದ ಕೃಷ್ಣ ಮೂರ್ತಿ ಆಚಾರ್ಯ ಉಡುಪಿ ಟೈಮ್ಸ್ ಗೆ ತಿಳಿಸಿದರು.

ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಪರಿಶೀಲನೆ ಅಥವಾ ಯಾವುದೇ ಮಾಹಿತಿಗಾಗಿ ಪೋರ್ಟಲ್‌ನಲ್ಲಿರುವ ಸಹಾಯವಾಣಿಗೆ ಕರೆ ಮಾಡಿದರೆ ಸದಾ ಕಾಲ ಬ್ಯುಸಿ ಬರುತ್ತಿದೆ. ಇಡಿಸಿಎಸ್‌ ಸಹಾಯವಾಣಿಗೆ ಕರೆ ಮಾಡಿದರೆ ಸಂಪರ್ಕವೇ ಸಾಧ್ಯವಾಗುತ್ತಿಲ್ಲ ಇನ್ನು ಯಾರಲ್ಲಿ ನಾವು ಸಹಾಯ ಕೇಳಬೇಕು ಎಂದು ಆಟೋ ಚಾಲಕರು ಅಳಲು ತೋಡಿಕೊಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!