ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಕಾಮತ್ ಆಕ್ರೋಶ
ಮಂಗಳೂರು: ರಾಜ್ಯದಲ್ಲಿ ಕೊರೋನಾ (ಓಮೈಕ್ರಾನ್ ಉಪತಳಿ ಜೆಎನ್.1) ಹಾವಳಿಯು ಮತ್ತೆ ಏರುಗತಿಯಲ್ಲಿದ್ದು ಆರಂಭದಲ್ಲಿಯೇ ಸಾವಿನ ಪ್ರಕರಣಗಳು ಕಂಡು ಬರುತ್ತಿವೆ. ಮಾನ್ಯ ಮುಖ್ಯಮಂತ್ರಿಗಳು ಈ ಸಾವುಗಳು ಕೋವಿಡ್ ನಿಂದಾಗಿಯೇ ಆಗಿದ್ದು ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಈ ಸಾವುಗಳು ಕೋವಿಡ್ ನಿಂದ ಆಗಿಲ್ಲ ಎಂದು ಕೂಡ ಖಡಾಖಂಡಿತವಾಗಿಯೂ ಹೇಳಲೂ ಸಾಧ್ಯವಿಲ್ಲ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು.
ನಮ್ಮ ಜಿಲ್ಲೆಯಲ್ಲಿಯೂ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ನಿನ್ನೆ ವ್ಯಕ್ತಿಯೋರ್ವರು ಮೃತ ಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಿರು ವುದರಿಂದ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುವವರೆಗೆ ಕಾಯದೇ ಜಿಲ್ಲಾಡಳಿತ ಈಗಿಂದಲೇ ಜಾಗೃತವಾಗಬೇಕು. ಕೋವಿಡ್ ನಿರ್ವಹಣೆ ಬಗ್ಗೆ ಸರ್ಕಾರವು ಇದುವರೆಗೆ ಗಂಭೀರವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸರ್ಕಾರ ಸೂಕ್ಷ್ಮತೆಯನ್ನೇ ಕಳೆದುಕೊಂಡಿರುವುದನ್ನು ತೋರಿಸುತ್ತದೆ. ಇಡೀ ಜಗತ್ತಿಗೆ ಕೊರೋನ ಎಂದರೆ ಏನೆಂಬುದೇ ಗೊತ್ತಿಲ್ಲದಂತಹ ಸಂದರ್ಭದಲ್ಲಿಯೂ ಕೂಡ ಹತ್ತು ಹಲವು ನಿಯಮಗಳ ಮೂಲಕ ಕೊರೋನ ನಿಯಂತ್ರಣಕ್ಕೆ ನಮ್ಮ ಸರ್ಕಾರ ಅಗತ್ಯವಿದ್ದ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಂಡಿತ್ತು. ಹಾಗಿದ್ದು ಕೂಡ ನಮ್ಮ ಸರ್ಕಾರವನ್ನು ಟೀಕಿಸುತ್ತಾ ಕಾಲ ಕಳೆದಿದ್ದ ಕಾಂಗ್ರೆಸ್ ಇಂದು ಜಗತ್ತಿಗೆ ಕೊರೋನ ಸಾಂಕ್ರಾಮಿಕ ಬಗ್ಗೆ ಮಾಹಿತಿ ಇರುವಂತಹ ಕಾಲದಲ್ಲಿ ಆರಂಭದಲ್ಲಿಯೇ ಮೂರು ಜೀವಗಳು ಹೋದರೂ ಗಂಭೀರವಾಗಿ ಪರಿಗಣಿಸಿಲ್ಲ. ಹಲವೆಡೆ ಆರೋಗ್ಯ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಕೊಟ್ಟಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು ಸರ್ಕಾರ ಹೇಗೆ ಕೋವಿಡ್ ನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿ.
ಸರ್ಕಾರವಂತೂ ಜೀವಗಳನ್ನು ರಕ್ಷಿಸುವ ಬದಲು ನಿಗಮ ಮಂಡಳಿ, ದೆಹಲಿ ಪ್ರವಾಸ, ತೆಲಂಗಾಣದ ವಿಜಯ, ಮುಂತಾದ ವಿಷಯಗಳಲ್ಲಿಯೇ ನಿರತವಾಗಿರುವುದು ರಾಜ್ಯದ ದುರಂತ. ತುರ್ತು ಸಮಯದಲ್ಲಿ ಆಸ್ಪತ್ರೆಗಳಲ್ಲಿ ಅಗತ್ಯವಾಗಿ ಬೇಕಿರುವ ಬೆಡ್ ಗಳ ಬಗ್ಗೆ, ವೆಂಟಿಲೇಟರ್ಗಳ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಕೋವಿಡ್ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಉಂಟಾಗಿದೆಯೇ ಎಂಬುದನ್ನು ಕೂಡಲೇ ಸರ್ಕಾರ ಬಹಿರಂಗಪಡಿಸಬೇಕು ಎಂದು ಆಗ್ರಹಿಸುತ್ತೇನೆ.
ಏಳು ತಿಂಗಳಾದರೂ ಶೂನ್ಯ ಅನುದಾನ: ಅಭಿವೃದ್ಧಿ ಕುಂಠಿತ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಮಂಗಳೂರು ನಗರಕ್ಕೆ ಯಾವುದೇ ಇಲಾಖೆಯಿಂದ ಒಂದೇ ಒಂದು ರೂಪಾಯಿ ಅನುದಾನ ಬಿಡುಗಡೆಯಾಗದ್ದು ಕ್ಷೇತ್ರದ ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗಿದೆ. ಅನುದಾನಗಳು ಬಿಡುಗಡೆಯಾಗದೇ ಯಾವುದೇ ಹೊಸ ಕಾಮಗಾರಿಗಳನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ, ಹಳೆಯ ಕಾಮಗಾರಿಗಳಲ್ಲಿಯೂ ಸಹ ಯಾವುದೇ ಪ್ರಗತಿ ಕಾಣುತ್ತಿಲ್ಲ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಪಿಡಬ್ಲ್ಯೂಡಿ ಇಲಾಖೆಯ ಹಲವಾರು ಕಾಮಗಾರಿಗಳು, ಮಂಗಳೂರು ಮಹಾನಗರ ಪಾಲಿಕೆಯ 125 ಕೋಟಿಯ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಕಾಮಗಾರಿ, ಮಂಗಳೂರು ಮಹಾನಗರ ಪಾಲಿಕೆಯ 20 ಕೋಟಿ ಮಳೆ ಹಾನಿಯ ವಿಶೇಷ ಅನುದಾನ ಕಾಮಗಾರಿ ಎಲ್ಲವೂ ಸ್ಥಗಿತಗೊಂಡಿದೆ. ಒಟ್ಟಾರೆಯಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಪಾಲಿಕೆಗೆ ಸುಮಾರು 175 ಕೋಟಿ ಮಂಜೂರಾಗಿದ್ದು ಇದೀಗ ಅನುದಾನ ಬಿಡುಗಡೆಯಾಗದೇ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ
ಇತ್ತೀಚಿಗೆ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಸುರೇಶ್ ರವರು ಮಂಗಳೂರಿನ ಎಮ್ಮೆಕೆರೆಯ ಸಿಮ್ಮಿಂಗ್ ಪೂಲ್ ಉದ್ಘಾಟನೆಗೆ ಬಂದಂತಹ ಸಂದರ್ಭದಲ್ಲಿ ಮಂಗಳೂರಿಗೆ 25 ಕೋಟಿ ಕೊಡುತ್ತೇವೆ, 50 ಕೋಟಿ ಕೊಡುತ್ತೇವೆ ಎಂದು ಘೋಷಿಸಿದ್ದರು. ನಾಲ್ಕೈದು ದಿನಗಳಲ್ಲಿ ಪಾಲಿಕೆಗೆ ಆ ಅನುದಾನವು ಸಿಗಲಿದೆ ಎಂದೂ ತಿಳಿಸಲಾಗಿತ್ತು. ಆದರೆ ತಿಂಗಳುಗಳೇ ಕಳೆದರೂ ಇದುವರೆಗೆ ಯಾವುದೇ ಅನುದಾನವೂ ಬಂದಿಲ್ಲ. ಈ ಬಗ್ಗೆ ಯಾವುದೇ ಆದೇಶವೂ ಬಂದಿಲ್ಲ ಸರ್ಕಾರವೇ ಘೋಷಿಸಿದಂತೆ ರಾಜ್ಯದ 223 ತಾಲೂಕುಗಳಲ್ಲಿ ತೀವ್ರ ಬರಗಾಲವಿದೆ. ಆರ್ಥಿಕ ಪರಿಸ್ಥಿತಿಯಂತೂ ಹಳ್ಳ ಹಿಡಿದಿದೆ. ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಅನುದಾನಗಳ ಕೊರತೆಯಾಗಿದೆ. ರೈತರ ಆತ್ಮಹತ್ಯೆಗಳ ಸರಣಿ ಮುಂದುವರಿದಿದೆ. ಆದರೆ ಸರ್ಕಾರದ ಐಷಾರಾಮಿ ಜೀವನಕ್ಕೆ ಮಾತ್ರ ಯಾವುದೇ ಕೊರತೆ ಇಲ್ಲ. ರಾಜ್ಯಕ್ಕೆ ಮಾತ್ರ ತೀವ್ರ ಬರಗಾಲ, ಸರ್ಕಾರದ ಮೋಜು ಮಸ್ತಿಗಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇಂತಹ ಸಮಯದಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಗಳು ಸೇರಿದಂತೆ ಸಚಿವರುಗಳು ಜನರ ತೆರಿಗೆ ದುಡ್ಡಲ್ಲಿ ದೆಹಲಿಗೆ ಖಾಸಗಿ ಐಷಾರಾಮಿ ವಿಮಾನದಲ್ಲಿ ಹಾರಾಡಿಕೊಂಡು ಬೇಕಾಬಿಟ್ಟಿ ರೀಲ್ಸ್ ಮಾಡಿಕೊಂಡು ಮೋಜು ಮಸ್ತಿ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಜನಸಾಮಾನ್ಯರ ಈ ಆಕ್ರೋಶ ಮುಂದಿನ ದಿನಗಳಲ್ಲಿ ಜನಾಂದೋಲನವಾಗಿ ಮಾರ್ಪಾಡಾಗಲಿದೆ.
ಇನ್ನೊಂದೆಡೆ ನಗರದಲ್ಲಿ 200 ಕೋಟಿಯ ಡ್ರೈನೇಜ್ ಕಾಮಗಾರಿಗಳಿಗೆ, sewage ಕಾಮಗಾರಿಗಳಿಗೆ ಅನುದಾನವಿಲ್ಲದೇ ಕಾರ್ಯಪ್ರಗತಿಯಾಗುತ್ತಿಲ್ಲ. ಸ್ಮಾರ್ಟ್ ಸಿಟಿಯ ರಿವರ್ ಫ್ರಂಟ್ ಯೋಜನೆಗೆ ಸಂಬಂಧಿಸಿದಂತೆ ಹಿಂದೆ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಪೋರ್ಟ್ ಇಲಾಖೆಯ ದೊಡ್ಡ ದೊಡ್ಡ ಜಾಗಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆದು ಕೊಂಡಿದ್ದ ಕೆಲವು tenant ದಾರರು ಇದೀಗ ಆ ಜಾಗವನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಅಲ್ಲದೇ ಸ್ಮಾರ್ಟ್ ಸಿಟಿಯ ಕಾಮಗಾರಿ ವೇಳೆ ಅರಣ್ಯ ಇಲಾಖೆಯವರ ಮೂಲಕ, ಸಿ.ಆರ್.ಝೆಡ್ ಅಧಿಕಾರಿಗಳ ಮೂಲಕ ಗೊಂದಲವನ್ನು ಸೃಷ್ಟಿಸಿ ಕಾಮಗಾರಿಯ ವೇಗವನ್ನು ಕುಂಠಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅಧಿಕಾರಿಗಳು ಕೂಡ ಸಾಥ್ ನೀಡುತ್ತಿದ್ದು ಇದಕ್ಕೆ ಕಾಂಗ್ರೆಸ್ ಸರ್ಕಾರದ ಕುಮ್ಮುಕ್ಕು ಇರುವುದು ಸ್ಪಷ್ಟ.
ಮಾಜಿ ಶಾಸಕರೊಬ್ಬರ ಪ್ರತಿಭಟನೆ!:
ನಗರದ ಹಂಪನಕಟ್ಟೆಯ ಬಸ್ಟ್ಯಾಂಡ್ ಹಾಗೂ ವ್ಯಾಪಾರಸ್ಥರಿಗೆ ಸರಿಯಾದ ವ್ಯವಸ್ಥೆಗಳು ಕಲ್ಪಿಸಬೇಕು ಎಂದು ಆಡಳಿತ ಪಕ್ಷದ ಇಲ್ಲಿನ ಮಾಜಿ ಶಾಸಕರೊಬ್ಬರು ಪ್ರತಿಭಟನೆ ನಡೆಸಿದ್ದು ಅತ್ಯಂತ ಹಾಸ್ಯಾಸ್ಪದವಾಗಿದ್ದು ಆ ಮಾಜಿ ಶಾಸಕರು ಇನ್ನೂ ಕೂಡ ತಾವು ವಿರೋಧ ಪಕ್ಷದಲ್ಲಿದ್ದೇವೆ ಎಂಬ ಭಾವನೆಯಲ್ಲಿದ್ದಾರೆ ಎಂದು ಕಾಣುತ್ತಿದೆ. ಪ್ರಸ್ತುತ ಈಗ ಅವರದ್ದೇ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಅವರದ್ದೇ ಸರ್ಕಾರದ ಮಂತ್ರಿಗಳು, ಅವರದ್ದೇ ಸರ್ಕಾರದ ಅಧಿಕಾರಿಗಳು, ಇದ್ದರೂ ಸಹ ಅವರಿಗೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಿಲ್ಲ ವೆಂದಾದರೆ ಜಿಲ್ಲೆಯಲ್ಲಿ ಅವರ ಮಾತಿಗಿರುವ ಬೆಲೆ ಏನು ಎಂಬುದು ಸ್ಪಷ್ಟವಾಗುತ್ತಿದೆ. ಸಾರ್ವಜನಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವಾಗ ಆ ಮಾಜಿ ಶಾಸಕರು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬಹುದಿತ್ತು. ಅದು ಬಿಟ್ಟು ಸಾರ್ವಜನಿಕರೊಂದಿಗೆ ಸೇರಿ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಪಕ್ಷದಲ್ಲಿ ಅವರ ಸ್ಥಾನ ಏನೆಂಬುದನ್ನು ತೋರಿಸಿ ಕೊಟ್ಟಿದ್ದಾರೆ.
ಇತ್ತೀಚಿಗೆ ಮಹಾನಗರ ಪಾಲಿಕೆಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುವ 34 ಜನರನ್ನು ಇವರದ್ದೇ ಸರ್ಕಾರ ನೇಮಕ ಮಾಡಿದ ಪಾಲಿಕೆ ಆಯುಕ್ತರು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ ಬಗ್ಗೆ ಉಂಟಾದ ವಿವಾದವನ್ನು ಬಗೆಹರಿಸಲು ಈ ಮಾಜಿ ಶಾಸಕರಿಗೆ ಆಯುಕ್ತರ ಜೊತೆ ಮಾತುಕತೆ ನಡೆಸಿಯೂ ಸಾಧ್ಯವಾಗಿಲ್ಲ. ಪಾಲಿಕೆಯ ಎಲ್ಲಾ ಅಧಿಕಾರಿಗಳು ನೇರವಾಗಿ ಸರ್ಕಾರದ ಅಧೀನದಲ್ಲಿ ಇರುವವರು. ಹಾಗಿದ್ದರೂ ಕೂಡಾ ಆ ಮಾಜಿ ಶಾಸಕರು ನಗರದ ಮೇಯರ್ ಅವರ ಜನಸ್ಪಂದನ ಕಾರ್ಯಕ್ರಮಕ್ಕೆ ಬಂದು ಈ ವಿಷಯ ಪ್ರಸ್ತಾಪಿಸುತ್ತಾರೆ ಎಂದರೆ ಅವರು ಅದೆಷ್ಟು ಅಸಹಾಯಕರಾಗಿದ್ದಾರೆ ಎಂದು ತಿಳಿದು ಬರುತ್ತದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಧಿಕಾರಿಗಳ ಮನಸ್ಥಿತಿಗೂ, ಇಂದಿನ ಕಾಂಗ್ರೆಸ್ ಸರ್ಕಾರದ ಅಧಿಕಾರಿಗಳ ಮನಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಪ್ರಸ್ತುತ ನಮ್ಮ ಕೆಲಸ ಕಾರ್ಯಗಳಿಗೆ ಕಾಂಗ್ರೆಸ್ ನವರ ಹಸ್ತಕ್ಷೇಪದಿಂದ ತೊಡಕುಂಟಾಗಬಹುದು. ಆದರೆ ಅವರದೇ ಸರ್ಕಾರದ ಆಡಳಿತದಲ್ಲಿ ಅವರೇ ಅಸಹಾಯಕರಾಗಿ ಪ್ರತಿಭಟನೆಗೆ ಇಳಿಯುತ್ತಾರೆಂದರೆ ಇನ್ನು ಸಾಮಾನ್ಯ ಜನರ ಪಾಡು ಏನು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.
ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್:
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಕರಾವಳಿಯ ಹಿಂದೂ ಕಾರ್ಯಕರ್ತರ ಮೇಲೆ ಏಕಪಕ್ಷೀಯವಾಗಿ ಗಡಿಪಾರು ಅಸ್ತ್ರ ಪ್ರಯೋಗಿಸುತ್ತಲೇ ಇದೆ. ತಿಂಗಳ ಹಿಂದೆಯಷ್ಟೇ ಐದು ಜನ ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ಜಾರಿ ಮಾಡಿದ್ದ ಜಿಲ್ಲೆಯ ಪೊಲೀಸರು, ಇದೀಗ ಮತ್ತೆ ಇಬ್ಬರು ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಣತಿಯಂತೆ ಇವೆಲ್ಲ ನಡೆಯುತ್ತಿದ್ದು ಪದೇ ಪದೇ ಹಿಂದೂ ಸಂಘಟನೆಗಳ ಕಾರ್ಯಕರ್ತರ ತಾಳ್ಮೆಯನ್ನು ಪರೀಕ್ಷಿಸುವುದನ್ನು ಹಾಗೂ ಹಿಂದೂಗಳ ಮೇಲಿನ ದ್ವೇ಼ಷ ರಾಜಕಾರಣವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸುತ್ತೇನೆ. ಇಲ್ಲದಿದ್ದಲ್ಲಿ ಹಿಂದೂ ಸಮಾಜದೊಂದಿಗೆ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡುತ್ತಿದ್ದೇನೆ.
ಪತ್ರಿಕಾಗೋಷ್ಟಿಯಲ್ಲಿ ದಕ್ಷಿಣ ಮಂಡಲದ ಬಿಜೆಪಿ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ರವಿಶಂಕರ ಮಿಜಾರ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾ ದ ರೂಪಾ ಡಿ ಬಂಗೇರ ಹಾಗೂ ಸುರೇಂದ್ರ ಜೆ. ಉಪಸ್ಥಿತರಿದ್ದರು.