ಉದ್ಯಾವರ: ಕೈಗಾರಿಕಾ ವಲಯ ಆದೇಶ ಹಿಂಪಡೆಯುವವರೆಗೆ ಹೋರಾಟ: ಸೊರಕೆ

ಉದ್ಯಾವರ: ಇನ್ನು ಕೆಲವೇ ದಿನಗಳಲ್ಲಿ ಆಗಮಿಸಲಿರುವ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು. ತಳ ಮಟ್ಟದ ಕಾರ್ಯಕರ್ತರನ್ನು ಸಂಘಟಿಸುವಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು.

ಸ್ಥಳೀಯ ಸಮಸ್ಯೆಗಳನ್ನು ಕೇಂದ್ರೀಕರಿಸಿಕೊಂಡು ರಾಜ್ಯ ಮತ್ತು ಕೇಂದ್ರ ಮಟ್ಟದ ಸಂಗತಿಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ಶ್ರಮವಹಿಸಿದಲ್ಲಿ ಯಶಸ್ಸು ನಮ್ಮದಾಗಬಹುದು ಎಂದು ಮಾಜಿ ಸಚಿವರು ಮಾಜಿ ಶಾಸಕರಾದ ವಿನಯ ಕುಮಾರ್ ಸೊರಕೆಯವರು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲಾ ರಂಗದಲ್ಲಿ ವಿಫಲವಾಗುತ್ತಿದೆ. ಜನರ ಗಮನವನ್ನು ಬೇರೆ ಕಡೆ ಸೆಳೆಯುದಕ್ಕಾಗಿ ಬಿಜೆಪಿ ಸರಕಾರಗಳು ಕಸರತ್ತನ್ನು ಮಾಡುತ್ತಿದೆ. ಆದರೆ ಜನರು ಮೂರ್ಖರಲ್ಲ. ಎಲ್ಲಾ ಸಮಯದಲ್ಲೂ ಎಲ್ಲರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತದ ಮೇಲಿನ ಅಸಮಧಾನವನ್ನು ತೋರಿಸಲು ಜನತೆಗೆ ಇದೊಂದು ಸುವರ್ಣಾವಕಾಶ. ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಬೆಂಬಲಿತ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್ ರಚನೆಯಾಗುವಂತೆ ಶ್ರಮಿಸಬೇಕು ಎಂದರು.


ಉದ್ಯಾವರದ ಜನತೆಗೆ ಮಾರಕವಾಗಬಹುದಾದ ಕೈಗಾರಿಕೆ ಸ್ಥಾಪಿಸಲು ಅನುಕೂಲವಾಗುವಂತೆ ಕೈಗಾರಿಕಾ ವಲಯ ಭೂ ಪರಿವರ್ತನೆಗೆ ಆದೇಶ ಮಾಡಿದ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸರ್ವಾಧಿಕಾರಿ ಮತ್ತು ಜನ ವಿರೋಧಿ ನಿಲುವನ್ನು ಖಂಡಿಸಿದ ಮಾಜಿ ಶಾಸಕರು ಜನವಿರೋಧಿ ಕೈಗಾರಿಕೆ ಸ್ಥಾಪನೆಗೆ ನಮ್ಮ ವಿರೋಧ ಯಾವತ್ತೂ ಇದೆ. ಈ ಆದೇಶ ಹಿಂಪಡೆಯಲು ಮುಂದಿನ ದಿನಗಳಲ್ಲಿ ತೀವ್ರವಾದ ಪ್ರಯತ್ನವನ್ನು ಮಾಡಲಾಗುವುದು ಎಂದರು.


ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿಯವರು ಗ್ರಾಮೀಣ ಸಮಿತಿಯಲ್ಲಿ ಕೆಲವು ಗೊಂದಲಗಳಿವೆ ಅದನ್ನು ಒಂದು ವಾರದೊಳಗೆ ಸರಿಪಡಿಸಿ ಪೂರ್ಣ ಪ್ರಮಾಣದ ಕ್ರಿಯಾಶೀಲ ಸಮಿತಿಯನ್ನು ರಚಿಸಲಾಗುವುದು ಎಂದರು.
ವೇದಿಕೆಯಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಸುಗಂಧಿ ಶೇಖರ್, ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಹಿರಿಯ ಕಾರ್ಯಕರ್ತರಾದ ಉದ್ಯಾವರ ನಾಗೇಶ್ ಕುಮಾರ್, ಲಾರೆನ್ಸ್ ಡೇಸಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಹೆಲೆನ್ ಫೆರ್ನಾಂಡಿಸ್, ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್ ಉದ್ಯಾವರರವರು ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!