ಅಲೆವೂರು ಗ್ರೂಪ್ ಅವಾರ್ಡ್‌ಗೆ ಉದ್ಯಾವರ ಮಾಧವ ಆಚಾರ್ಯ ಆಯ್ಕೆ

ಅಲೆವೂರು: ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ವತಿಯಿಂದ ನೀಡಲಾಗುವ 2019 ನೇ ಸಾಲಿನ ಪ್ರತಿಷ್ಟಿತ ಅಲೆವೂರು ಗ್ರೂಪ್ ಅವಾರ್ಡ್‌ಗೆ ಹೆಸರಾಂತ ಸಾಹಿತಿ, ಸೃಜನಶೀಲ ಕಲಾವಿದ, ರಂಗ ನಿರ್ದೇಶಕ, ಚಿಂತಕ, ವಾಗ್ಮಿ ಪ್ರೊ. ಉದ್ಯಾವರ ಮಾಧವ ಆಚಾರ್ಯ ಆಯ್ಕೆಯಾಗಿದ್ದಾರೆ.


ಕನ್ನಡ ಸಾರಸ್ವತ ಲೋಕಕ್ಕೆ ಸಣ್ಣ ಕಥೆಗಳು, ಕವನ ಸಂಕಲನ, ಪ್ರಬಂಧ ಸಂಕಲನ, ನಾಟಕಗಳ ಜೊತೆಗೆ `ರಂಗ ರೂಪಕ ಸಾಹಿತ್ಯ ಕೃತಿ’ಗಳನ್ನು ಕೊಡುಗೆಯಾಗಿ ನೀಡಿದ ಪ್ರೊ. ಉದ್ಯಾವರ ಮಾಧವ ಆಚಾರ್ಯ ಅವರು ಸಮೂಹ ಕಲಾವಿದರು ಉಡುಪಿ ಲಾಂಛನದಡಿ ಹಲವಾರು ರೂಪಕಗಳನ್ನು ಪರಿಕಲ್ಪಿಸಿ, ನಿರ್ದೇಶಿಸಿದವರು. ಆ ಮೂಲಕ ರಾಷ್ಟ್ರೀಯ ಮನ್ನಣೆ ಪಡೆದವರು.


ಡಿ. 7ರಂದು ಶನಿವಾರ ಅಪರಾಹ್ನ ೨.೩೦ಕ್ಕೆ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ೧೫ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಬೆಳ್ಳಿ ಫಲಕ ಸಹಿತ ಅಲೆವೂರು ಗ್ರೂಪ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಪ್ರಾಶುಪಾಲ ವಿನ್ಸೆಂಟ್ ಆಳ್ವ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವರು. ಅಲೆವೂರು ಗ್ರೂಪ್ ಫೋರ್ ಎಜುಕೇಶನ್ ಅಧ್ಯಕ್ಷ ಎ. ಗಣಪತಿ ಕಿಣಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು, ಎಂದು ಅಲೆವೂರು ಗ್ರೂಪ್ ಫೋರ್ ಎಜುಕೇಶನ್ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಹಿಂದೆ ಪಿ. ರಬೀಂದ್ರ ನಾಯಕ್, ಮುರಾರಿ ಬಲ್ಲಾಳ್ (ಮರಣೋತ್ತರ), ರಮೇಶ್ ರಾವ್, ಡಾ. ರಮಾನಂದ ಭಟ್ (ಮರಣೋತ್ತರ), ಡಾ. ಯು.ಎಮ್. ವೈದ್ಯ, ಡಾ. ಮೋಹನ್ ಆಳ್ವಾ, ಶಿರ್ತಾಡಿ ವಿಲಿಯಂ ಪಿಂಟೊ, ಸಾರಾ ಅಬೂಬಕ್ಕರ್, ಡಾ. ಪ್ರತಾಪ್ ಕುಮಾರ್, ಪ್ರೊ. ಎಮ್.ಡಿ. ನಂಜುಂಡ, ಡಾ. ಪಿ.ವಿ. ಭಂಡಾರಿ, ಡಾ. ಎನ್. ಎ. ಮಧ್ಯಸ್ಥ, ಎ. ಈಶ್ವರಯ್ಯ, ಡಾ. ವೈ.ಎನ್. ಶೆಟ್ಟಿ, ಪ್ರಹ್ಲಾದ ಆಚಾರ್ಯ, ಪ್ರೊ. ಮ್ಯಾಥ್ಯೂ ಸಿ. ನೈನನ್, ಡಾ. ಎ.ಪಿ. ಭಟ್ ಅವರಿಗೆ ಅಲೆವೂರು ಗ್ರೂಪ್ ಅವಾರ್ಡ್ ನೀಡಿ ಗೌರವಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!