ಉದ್ಯಾವರ: ಕೈಗಾರಿಕಾ ವಲಯಕ್ಕೆ ಕಾಂಗ್ರೆಸ್‌ನ ಮಾಜಿ ಶಾಸಕರ ಪರ-ವಿರೋಧದ ಮೇಲಾಟ
ಉಡುಪಿ: ಉದ್ಯಾವರ ಪಂಚಾಯತ್ ವ್ಯಾಪ್ತಿಯಲ್ಲಿ ಮತ್ತೆ ಕೈಗಾರಿಕಾ ವಲಯ ಸ್ಥಾಪನೆಗೆ ಸ್ಥಳೀಯರು ತೀವೃ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್‌ನ ಮಾಜಿ ಶಾಸಕರಿರ್ವರ ಭಿನ್ನಮತ ಬಹಿರಂಗವಾಗಿದೆ.
ಉದ್ಯಾವರದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಜಿಲ್ಲಾ ಪಂಚಾಯತ್ ನ್ಯಾಯಾಲಯದಲ್ಲಿ ಅನುಮತಿ ದೊರೆಯುತ್ತಿದ್ದಂತೆ ಇಲ್ಲಿನ ನಿವಾಸಿಗಳಲ್ಲಿ ಮತ್ತೆ ಜೀವಿಸಲಾಸಾಧ್ಯವಾದ ವಾತಾವರಣ ನಿರ್ಮಾಣವಾಗುವ ಭಯದಲ್ಲಿದ್ದಾರೆ. ಈ ಭಾಗದಲ್ಲಿ ಕೈಗಾರಿಕಾ ವಲಯಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಾಪು ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ನ ತುರ್ತು ಸಭೆ ಕರೆದು ಸೋಮವಾರ ಮಧ್ಯಾಹ್ನ 3 ಗಂಟೆಗೆ ಉದ್ಯಾವರ ಪಂಚಾಯತ್ ಎದುರು ಸಾರ್ವಜನಿಕರೊಂದಿಗೆ ಪ್ರತಿಭಟನೆಗೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ನಡುವೆ ಮಾಜಿ ಶಾಸಕರಾದ ಯು.ಆರ್ ಸಭಾಪತಿ ಉದ್ಯಾವರದಲ್ಲಿ ಕೈಗಾರಿಕಾ ವಲಯ ಸ್ಥಾಪನೆಯನ್ನು ಸ್ವಾಗತಿಸಿದ್ದಾರೆ. ಮೀನುಗಾರರು ಎಂದರೆ ಕೇವಲ ಮೊಗವೀರರು ಮಾತ್ರವಲ್ಲ, ಎಲ್ಲಾ ಸಮುದಾಯದ ಮೀನುಗಾರಿಕೆಯಲ್ಲಿ ತೊಡಗಿದ್ದು, ಇದರಿಂದ ಸ್ವಂತ ಉದ್ಯೋಗ ಮಾಡುವುದಲ್ಲದೆ, ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ. ಮೀನಿಗೆ ಸಂಬಂಧಪಟ್ಟ ಕೈಗಾರಿಕೆಗೆ ಅವಕಾಶ ಕೊಡುವುದಿಲ್ಲ ಎನ್ನುವುದು ಎಷ್ಟು ಸರಿ ಎಂದು ವಿರೋಧಿಸಲು ಹೊರಟವರಿಗೆ ಪ್ರಶ್ನಿಸಿದ್ದಾರೆ. ಉದ್ಯಾವರದಲ್ಲಿ ಫಿಶಿಮಿಲ್‌ಗೆ ಸ್ಥಳೀಯರ ವಿರೋಧ ಹೊರತು ಕೈಗಾರಿಕಾ ವಲಯ ಸ್ಥಾಪನೆಗೆ ಅಲ್ಲ. ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆದೇಶ ಸಮಸ್ತ ಮೀನುಗಾರ ಸಮುದಾಯ ಗೌರವಿಸುತ್ತದೆನ್ನುವ ಮಾಜಿ ಶಾಸಕ ಯು.ಆರ್.ಸಭಾಪತಿಯವರ ವಾಟ್ಸ್ ಆಪ್ ಸಂದೇಶ ಹರಡಿದೆ.
ಈ ಬಗ್ಗೆ ಮಾಜಿ ಶಾಸಕ ಯು.ಆರ್.ಸಭಾಪತಿಯವರನ್ನು “ಉಡುಪಿ ಟೈಮ್ಸ್” ಮಾತನಾಡಿಸಿದಾಗ ನಾನು ಕೈಗಾರಿಕಾ ವಲಯ ಸ್ಥಾಪನೆ ಸ್ವಾಗತಿಸುತ್ತೆನೆ, ಮೀನು ಸಂಸ್ಕರಣಾ ಘಟಕ ಪ್ರಾರಂಭವಾದರೆ ಈ ಭಾಗದಲ್ಲಿ ಅನೇಕ ಉದ್ಯೋಗ ಸೃಷ್ಠಿಯಾಗುತ್ತದೆ ಎಂದರು. ಕೆಲವೊಂದು ವ್ಯಕ್ತಿಗಳು ಮತ್ತೆ ಮುಖಂಡರಾಗಲು ಹೋರಾಟಕ್ಕೆ ಇಳಿದಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ “ಉಡುಪಿ ಟೈಮ್ಸ್”ನೊಂದಿಗೆ ಮಾತನಾಡಿ ಉದ್ಯಾವರ ಪಂಚಾಯತ್ ವ್ಯಾಪ್ತಿಯಲ್ಲಿ 14000 ಜನಸಂಖ್ಯೆಯಿರುವ ವಸತಿ ಪ್ರದೇಶದಲ್ಲಿ ಜನ ಪರಿಸರ ಮಾಲಿನ್ಯದಿಂದಾಗಿ ಈಗಾಲೇ ಜೀವಿಸದಂತಾಗಿದೆ. ಇಲ್ಲಿ ಮತ್ತೆ ಕೈಗಾರಿಕಾ ವಲಯ ಸ್ಥಾಪನೆಗೆ ಅನುಮತಿ ನೀಡಿದರೆ ಜನರು ತೀವೃ ಹೊರಾಟಕ್ಕೆ ಇಳಿಯಲಿದ್ದಾರೆ. ಅದಕ್ಕಾಗಿ ಜನರೊಂದಿಗೆ ಕಾಂಗ್ರೆಸ್ ಪಕ್ಷವು ಕೈಗಾರಿಕಾ ವಲಯ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದೆ, ರವಿವಾರ 12 ಕಡೆ ಗ್ರಾಮೀಣ ಕಾಂಗ್ರೆಸ್‌ನ ತುರ್ತು ಸಭೆ ಕರೆದು ಸೋಮವಾರ ಪಂಚಾಯತ್ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು. ಈ ಹಿಂದೆ ಜಿಲ್ಲಾ ಪಂಚಾಯತ್ ಅಧ್ಯಕ್ಷರೇ ಫಿಶ್ ಮಿಲ್ ಘಟಕ್ಕೆ ವಿರೋಧ ಹೋರಾಟದಲ್ಲಿ ಭಾಗವಹಿಸಿ ಈಗ ಕೈಗಾರಿಕಾ ವಲಯ ಸ್ಥಾಪನೆಗೆ ಅನುಮತಿ ನೀಡಿದ್ದಾರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.