ತುಮಕೂರು: ಕೊರೊನಾಗೆ ರಾಜ್ಯದ 3ನೇ ಬಲಿ
ತುಮಕೂರು: ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಶಿರಾ ಮೂಲದ 65 ವರ್ಷದ ವೃದ್ಧ ಎಂದು ಗುರುತಿಸಲಾಗಿದೆ. ಮೃತರಿಗೆ ಸುಮಾರು ಐದು ದಿನದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತ ಎಂದು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 10.45ಕ್ಕೆ ಮೃತಪಟ್ಟಿದ್ದಾರೆ.
ಮೃತ ವೃದ್ಧ ಮಾರ್ಚ್ 5ಕ್ಕೆ ದೆಹಲಿಗೆ ಹೋಗಿದ್ದರು. ಮಾರ್ಚ್ 18 ರಂದು ಜ್ವರ ಕಾಣಿಸಿಕೊಂಡಿದೆ. ತಕ್ಷಣ ಅವರು ಶಿರಾದಿಂದ ಬಸ್ಸಿನಲ್ಲಿ ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲಿಂದ 19 ಮತ್ತು 20 ರಂದು ಎಲ್ಲಾ ಕಡೆ ಓಡಾಡಿದ್ದರು. ಆದರೆ ಜ್ವರ ವಾಸಿಯಾಗಿರಲಿಲ್ಲ. ಕೊನೆಗೆ ಮಾರ್ಚ್ 23 ರಂದು ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿದ್ದು. ಅಂದಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗುರುವಾರದವರೆಗೂ ತುಮಕೂರಿನಲ್ಲಿ ಒಂದೇ ಒಂದು ಕೊರೊನಾ ವೈರಸ್ ಸೋಂಕಿತರು ಇರಲಿಲ್ಲ. ಕಳೆದ ದಿನ ಎರಡು ಕೊರೊನಾದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ತಡರಾತ್ರಿ ಕೊರೊನಾ ವರದಿ ಬಂದಿದ್ದು, ಅದರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಕೊರೊನಾ ಪಾಸಿಟಿವ್ ವರದಿ ಬಂದ ಮರುದಿನ ಬೆಳಗ್ಗೆಯೇ ವೃದ್ಧ ಮೃತಪಟ್ಟಿದ್ದಾರೆ.
ವೃದ್ಧನ ಕುಟುಂಬದಲ್ಲಿ 25 ಮಂದಿ ಇದ್ದು ಅವರನ್ನು ಐಸೋಲೇಶನ್‍ನಲ್ಲಿ ಇರಿಸಲಾಗಿದೆ. ಅಲ್ಲದೇ ವೃದ್ಧ 33 ಮಂದಿ ಜೊತೆ ಸಂಪರ್ಕ ಹೊಂದಿದ್ದರು. ಅವರ ಮೇಲೂ ತೀವ್ರ ನಿಗಾ ವಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.