ತುಳುವರ ಬದುಕು ನೆಲೆ ಕಳೆದುಕೊಳ್ಳುತ್ತಿದೆ – ಡಾ. ವೈ. ಎನ್. ಶೆಟ್ಟಿ ವಿಷಾಧ
ಉಡುಪಿ:ತುಳುವರ ಬದುಕು ತನ್ನ ಮೂಲನೆಲೆಯನ್ನು ಕಳೆದುಕೊಳ್ಳುತ್ತಿದೆ. ಇದನ್ನು ಸರಿಪಡಿಸುವ ಬಗ್ಗೆ ಗಂಭೀರ ಚಿಂತನೆಗಳಾಗಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ವೈ.ಎನ್.ಶೆಟ್ಟಿ ಹೇಳಿದ್ದಾರೆ.
ಅವರು ಶನಿವಾರ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ತುಳುಕೂಡ ಒಡಿಪು ಇದರ ವತಿಯಿಂದ ನಡೆದ ಮದರೆಂಗಿದ ರಂಗ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ತುಳುವರ 16 ಸಂಸ್ಕಾರಗಳಲ್ಲಿ ಒಂದಾಗಿರುವ ಮದುವೆಯ ಸಂದರ್ಭದಲ್ಲಿ ವಧುವಿಗೆ ಮದರೆಂಗಿ ಹಚ್ಚುವುದು ಧಾರ್ಮಿಕ ಸಂಪ್ರದಾಯದ ಜೊತೆಗೆ ಅದೊಂದು ಔಷಧೀಯ ಪದ್ದತಿಯೂ ಆಗಿತ್ತು. ಸಂಬಂಧಿಕರು ನೆರೆಹೊರೆಯವರಲ್ಲರೂ ಸೇರಿ ಕೂಡಿ ಹಾಡಿ ಸಂತಸಪಡುವುದಕ್ಕೆ ಅದೊಂದು ಕಾರಣವಾಗಿತ್ತು.
ಆದರೇ ಇಂದು ಅದೇ ಕಾರ್ಯಕ್ರಮ ಮದ್ಯದ ಅಮಲಿನಲ್ಲಿ ಸಿನೆಮಾ ಡಿಜೆ ಹಾಡಿಗೆ ಕುಣಿದು ಮೋಜು ಮಾಡುವ ಮೆಹಂದಿ ಎಂದು ಆಚರಿಸಲಾಗುತ್ತಿದೆ. ಇದು ನಮ್ಮ ಸಂಪ್ರದಾಯವೂ ಅಲ್ಲ, ಅದಕ್ಕೆ ಯಾವ ಅರ್ಥವೂ ಇಲ್ಲ ಎಂದವರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ಧ ಪತ್ರಕರ್ತ ಶ್ರೀಕಾಂತ ಶೆಟ್ಟಿ ಅವರು, ತುಳುನಾಡಿನಲ್ಲಿ ಕ್ರೈಸ್ತರ ಬೆಳಸಿದ ಮಲ್ಲಿಗೆಯನ್ನು ಮಸ್ಲೀಮರು ಮಾರುತ್ತಿದ್ದರು, ಅದನ್ನು ಹಿಂದಿಗಳು ಖರೀದಿಸಿ ದೇವರ ಪೂಜೆಗೆ ಬಳಸುತ್ತಿದ್ದರು, ಇಂತಹ ಕೊಡುಬದುಕು ಇಲ್ಲಿತ್ತು, ಆದರೇ ಇಂದು ಅದೆಲ್ಲವೂ ನಾಶವಾಗಿದೆ ಎಂದು ಬೇಸರಿಸಿದರು. ತುಳು ಸಂಸ್ಕೃತಿಯನ್ನು ಉಳಿಸುವುದಕ್ಕೆ ಹಿರಿಯರು ಸೇರಿ ಉಪಾಯವೊಂದನ್ನು ಕಂಡುಕೊಳ್ಳಬೇಕಾಗಿದೆ ಎಂದವರು ಆಶಿಸಿದರು.
ಕಾರ್ಯಕ್ರಮವನ್ನು ಸೈನಿಕ ಶಾಲೆಯ ನಿವೃತ ಶಿಕ್ಷಕಿ ತುಳಸಿ ದೇವಾಡಿಗ, ಕ್ರೈಸ್ತ ಧರ್ಮಪ್ರಾಂತ್ಯದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾನೆಟ್ ಬರ್ಬೋಜ ಮತ್ತು ಅನುಪಮಾ ಪತ್ರಿಕೆಯ ಸಹಸಂಪಾದಕಿ ಕುಲ್ಸೂಮ್ ಅಬೂಬಕ್ಕರ್ ಅವರು ಮಕ್ಕಳ ಕೈಗೆ ಮದರೆಂಗಿ ಇಜುವ ಮೂಲಕ ಉದ್ಘಾಟಿಸಿದರು.
ಅತಿಥಿಗಳಾಗಿ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಪ್ರ.ಸಂಪಾದಕ ಎಸ್.ಆರ್.ಬಂಡಿಮಾರ್ ಆಗಮಿಸಿದ್ದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ತುಳುಕೂಟ ಅಧ್ಯಕ್ಷ ವಿ.ಜಿ.ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷರಾಗ ಲಕ್ಷ್ಮೀಕಾಂತ್ ಬೆಸ್ಕೂರ್, ಮಹಮ್ಮದ್ ಮೌಲ, ವಿದ್ಯಾ, ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಎಂ.ಜಿ.ಚೈತನ್ಯ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕಾರ್ಯಕ್ರಮದ ಸಂಚಾಲಕಿಯರಾದ ಜ್ಯೋತಿ ಎಸ್.ದೇವಾಡಿಗ ಅವರು ಸ್ವಾಗತಿಸಿ, ಯಶೋದ ಕೇಶವ್ ಕಾರ್ಯಕ್ರಮ ನಿರೂಪಿಸಿದರು.
ಮದರೆಂಗಿದ ರಂಗ್ ಕಾರ್ಯಕ್ರಮದಲ್ಲಿ ಮಕ್ಕಳಿಂದ ವಯೋವೃದ್ಧರವರೆಗೆ ಮಹಿಳೆ – ಪುರುಷರೆಲ್ಲರಿಗೂ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ತೆಂಗಿನ ಗರಿಯಲ್ಲಿ ಆಟಿಗಳನ್ನು ತಯಾರಿಸುವುದು, ಹಲಸಿನ ಹಣ್ಣಿನ ಸಿಪ್ಪೆ ಸುಲಿಯುವುದು, ತೇವುದ ಎಲೆಯಲ್ಲಿ ಬಕೇಟಿಗೆ ನೀರು ತುಂಬಿಸುವುದು, ಎಲೆಯ ಪೀಪಿಯನ್ನು ಊದುವುದು, ಔಷಧಿಯ ಸಸ್ಯಗಳ ಹೆಸರು ಬರೆಯುವುದು, ತುಳುವರ ಉಡುಗೆತೊಡುಗೆ, ಹೂಕಟ್ಟುವುದು, ಬತ್ತಿ ಹೊಸೆಯುವುದು, ರಂಗೋಲಿ ಬಿಡಿಸುವುದು ಮತ್ತು ಕೈಮೇಲೆ ಮದರೆಂಗಿಯನ್ನು ಬರೆಯುವುದು ಇತ್ಯಾದಿ ಸ್ಪರ್ಧೆಗಳನ್ನು ನಡೆಸಲಾಯಿತು.