ಹಿಂಸಾಚಾರದಿಂದ ಹೋರಾಟ ಹತ್ತಿಕ್ಕಲು ಯತ್ನ- ಸುಂದರ್ ಮಾಸ್ತರ್
ಉಡುಪಿ: ‘ಕೇಂದ್ರ ಸರ್ಕಾರವು ದೇಶದಲ್ಲಿ ಹಿಂಸಾಚಾರ ಉಂಟು ಮಾಡುವ ಮೂಲಕ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯ್ದೆ ವಿರೋಧಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ’ ಎಂದು ದಲಿತ ಮುಖಂಡ ಸುಂದರ್ ಮಾಸ್ತರ್ ಆರೋಪಿಸಿದರು.
ದೆಹಲಿ ಗಲಭೆ ಖಂಡಿಸಿ ಸಹಬಾಳ್ವೆ ಉಡುಪಿ ನೇತೃತ್ವದಲ್ಲಿ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಬಳಿ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
‘ಸರ್ಕಾರ ಪೊಲೀಸರ ಮೇಲೆ ಒತ್ತಡ ಹಾಕಿ ಸಿಎಎ ಕಾಯ್ದೆಯ ವಿರೋಧಿ ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಕುತಂತ್ರದ ಮೂಲಕ ಪ್ರತಿಭಟನೆಗಳನ್ನು ತಡೆಯುವ ಯತ್ನ ಮಾಡುತ್ತಿದೆ’ ಎಂದು ದೂರಿದರು.
ಚಿಂತಕ ಜಿ. ರಾಜಶೇಖರ್ ಮಾತನಾಡಿ, ‘ಕೇಂದ್ರ ಸರ್ಕಾರದ ಸಿಎಎ, ಎನ್‌ಆರ್‌ಸಿ ಕಾಯ್ದೆಗೆ ಎನ್‌ಡಿಎ ಮೈತ್ರಿಕೂಟದ 13 ಪಕ್ಷಗಳ ಪೈಕಿ 10 ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಧರ್ಮದ ಆಧಾರದಲ್ಲಿ ಪೌರತ್ವ ಕೊಡುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ಬಿಜೆಪಿ ಬೇಜವಾಬ್ದಾರಿತನದ ಪಕ್ಷ. ಅದಕ್ಕೆ ಸಂವಿಧಾನ ಬಗ್ಗೆ ನಿಷ್ಟೆ ಇಲ್ಲ. ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದೆ’ ಎಂದು ಆರೋಪಿಸಿದರು.
‘ಹಿಂದೂ–ಮುಸ್ಲಿಮರನ್ನು ಒಡೆದು ಆಳುವ ಬಿಜೆಪಿಯ ಕುತಂತ್ರ ವಿಫಲವಾಗಿದೆ. ಕೇಂದ್ರ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಸಿಎಎ, ಎನ್‌ಆರ್‌ಸಿ ಕಾಯ್ದೆಯ ಮೂಲಕ ಹಣಗಳಿಸಲು ಯೋಚಿಸುತ್ತಿದೆ’ ಎಂದು ಚಿಂತಕ ವಿಲಿಯಂ ಮಾರ್ಟಿಸ್ ಟೀಕಿಸಿದರು.
ಸಹಬಾಳ್ವೆ ಅಧ್ಯಕ್ಷ ಅಮೃತ್ ಶೈಣೈ ಮಾತನಾಡಿ, ‘ಕೇಂದ್ರ ಸರ್ಕಾರ ಒಂದು ಧರ್ಮವನ್ನು ಒಲೈಸುವ ಸಲುವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. ಅದು ಈಗ ಅವರಿಗೆ ಮುಳುವಾಗಿದೆ. ದೇಶದಾದ್ಯಂತ ನಿರಂತರ ಪ್ರತಿಭಟನೆ ನಡೆಯುತ್ತಿದೆ’ ಎಂದರು.
ಚಿಂತಕ ಪ್ರೊ. ಫಣಿರಾಜ್, ಜಮೀಲ ಹೂಡೆ, ಸಿಪಿಐಎಂನ ಬಾಲಕೃಷ್ಣ ಶೆಟ್ಟಿ, ಹುಸೇನ್ ಕೋಡಿಬೆಂಗ್ರೆ ಮಾತನಾಡಿದರು.
ಎಸ್‌ಐಒ ಜಿಲ್ಲಾ ಘಟಕದ ಅಧ್ಯಕ್ಷ ನಾಸೀರ್ ಹೂಡೆ, ಶಾಮ್‌ರಾಜ್ ಬಿರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ರೇಷ್ಮಾ ಉಡುಪಿ, ಅನ್ವರ್ ಅಲಿ ಕಾಪು, ನಾಗೇಶ್ ಉದ್ಯಾವರ, ಅಬಲ್ ಅಝೀಜ್ ಉಪಸ್ಥಿತರಿದ್ದರು.