ಅಸಮಾನತೆಯನ್ನು ಬದಲಾಯಿಸಲು ಪ್ರಯತ್ನಿಸಿದವರು ಬಸವಣ್ಣ: ಚಿಂತಕ ಜಿ. ರಾಜಶೇಖರ್
ಉಡುಪಿ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಲದ ಪ್ರವಾಹ, ಪ್ರವೃತಿ ಹಾಗೂ ಬಹುಜನರ ಸಂಕಲ್ಪದ ವಿರುದ್ಧ ಈಜಿ ಅಸಮಾನತೆಯ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದರು. ಇಂದು ಸಾಣೆಹಳ್ಳಿ ಸ್ವಾಮೀಜಿ ಕಾಲದ ಪ್ರವಾಹದ ವಿರುದ್ಧ ಈಜಲು ಹೊರಟಿದ್ದು, ಆ ಮೂಲಕ ಬಸವಣ್ಣರ ಸಂದೇಶಗಳನ್ನು ಜನರಿಗೆ ಮುಟ್ಟಿಸಲು ಸಂಕಲ್ಪಿಸಿದ್ದಾರೆ. ಅವರಿಗೆ ನಾವೆಲ್ಲ ಬೆಂಬಲ ನೀಡಬೇಕಾಗಿದೆ ಎಂದು ಹಿರಿಯ ಚಿಂತಕ ಜಿ. ರಾಜಶೇಖರ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಸಹಮತ ವೇದಿಕೆ ಮತ್ತು ಉಡುಪಿ ಬಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆ. ೨ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿರುವ ಮತ್ತೆ ಕಲ್ಯಾಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಉಡುಪಿ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಉಡುಪಿ ಬಸವ ಸಮಿತಿಯ ಗೌರವಾಧ್ಯಕ್ಷ ಡಾ.ಜಿ.ಎಸ್. ಚಂದ್ರಶೇಖರ್ ಮಾತನಾಡಿ, ಯಾವುದೇ ಜಾತಿ, ಮತ, ಲಿಂಗ ಬೇಧ ಇಲ್ಲದೆ ಎಲ್ಲರೂ ವಿಶ್ವಮಾನವರು ಎಂಬುದಾಗಿ ಬಸವಣ್ಣನವರುಸಾರಿದ್ದಾರೆ.ಈಸಂದೇಶವನ್ನುಈಗಲೂ ಈಡೇರಿಸಲು ನಮಗೆಸಾಧ್ಯವಿದೆ.
ಹಾಗಾಗಿ ಎಲ್ಲರೂ ಒಗ್ಗೂಡಿ ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ ಎಂದರು. ದಸಂಸ ಹಿರಿಯ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ಬಸವ ತತ್ವ ಮತ್ತು ಆದರ್ಶಗಳು ಎಲ್ಲ ಕಡೆಗಳಿಗೆ ಪ್ರಸಾರವಾಗಲು ರಾಜ್ಯದ ಹಲವಾರು ಮಠಗಳ ಶ್ರಮದಿಂದ ಸಾಧ್ಯವಾಗಿದೆ. ಜನ ಸಾಮಾನ್ಯರಿಗೆ ಧಾರ್ಮಿಕ ವಿಚಾರಗಳನ್ನು ಮುಟ್ಟಿಸಿ ಅಸಮಾನತೆಯನ್ನು ಹೊಗಲಾಡಿಸುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಮತ್ತೆ ಕಲ್ಯಾಣ ಉಡುಪಿ ಸಂಯೋಜನ ಸಮಿತಿಯ ಅಧ್ಯಕ್ಷ ಯು.ಸಿ. ನಿರಂಜನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯಾಯ , ಧರ್ಮಗುರು ವಿಲಿಯಂ ಮಾರ್ಟಿಸ್, ಉಡುಪಿ ಬಸವ ಸಮಿತಿಯ ಅಧ್ಯಕ್ಷ ಜಿ.ಎಂ. ಪಾಟೀಲ, ಉಪಾಧ್ಯಕ್ಷ ಪ್ರೊ. ಸಿದ್ದರಾಮಣ್ಣ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಬ್ದುಲ್ ಅಝೀಝ್ ಉದ್ಯಾವರ, ದಲಿತ ಮುಖಂಡ ಶ್ಯಾಂರಾಜ್ ಬಿರ್ತಿ ಉಪಸ್ಥಿತರಿದ್ದರು. ದಿನಕರ ಎಸ್. ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.