ವರ್ಗಾವಣೆಗೆ ಜನಪ್ರತಿನಿಧಿಗಳ ಶಿಫಾರಸು ಕಾನೂನು ಬಾಹಿರ:ಹೈಕೋರ್ಟ್
ಬೆಂಗಳೂರು: ಮುಖ್ಯಮಂತ್ರಿ ಸೇರಿದಂತೆ ಹಲವು ಜನಪ್ರತಿನಿಧಿಗಳ ಶಿಫಾರಸು ಆಧರಿಸಿ ಅಧಿಕಾರಿಗಳ ವರ್ಗಾವಣೆ ಮಾಡುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಹೇಳಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಕಾರಿ ಇಂಜಿನಿಯರ್ ಒಬ್ಬರ ವರ್ಗಾವಣೆಗೆ ಕೇಂದ್ರ ಸಚಿವರೊಬ್ಬರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಅದನ್ನು ಮುಖ್ಯಮಂತ್ರಿಗಳು ಅನುಮೊದಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.
ಬಿಬಿಎಂಪಿ ಕಾರ್ಯಕಾರಿ ಇಂಜಿನಿಯರ್ ವರ್ಗಾವಣೆ ಸಂಬಂಧ ಎಲ್ಲರಿಗೂ ದಂಡ ವಿಧಿಸಲಬಹುದು. ಆದರೆ, ಆದರೆ, ಆ ರೀತಿ ನಡೆದುಕೊಳ್ಳಲು ಕೋರ್ಟ್‌ಗೆ ಇಷ್ಟವಿಲ್ಲ. ಆದ್ದರಿಂದ ಸಂಬಂಧಪಟ್ಟವರು ಸ್ವತಃ ತಮ್ಮನ್ನು ತಾವು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು. ಇಂತಹ ಕಾನೂನುಬಾಹಿರ ವರ್ಗಾವಣೆಗಳು ಮರುಕಳಿಸಬಾರದು ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ತಮ್ಮ ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಕೋರಿ ಬಿಬಿಎಂಪಿ ಹೆಬ್ಬಾಳ ವಲಯದ ಕಾರ್ಯಕಾರಿ ಇಂಜಿನಿಯರ್ ಕೆ.ಎಂ. ವಾಸು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರು, ವರ್ಗಾವಣೆ ಆದೇಶ ರದ್ದುಗೊಳಿಸಿದ್ದಲ್ಲದೆ, ಅರ್ಜಿದಾರರನ್ನು ಅವರ ಮೂಲ ಹುದ್ದೆಯಲ್ಲಿ ಮುಂದುವರಿಸುವಂತೆ ಬಿಬಿಎಂಪಿ ಆಯುಕ್ತರು ಮತ್ತು ಉಪ ಆಯುಕ್ತರು (ಆಡಳಿತ) ಇವರಿಗೆ ನಿರ್ದೇಶನ ನೀಡಿ ಮಹತ್ವದ ಆದೇಶ ಹೊರಡಿಸಿದ್ದಾರೆ.
2019ರ ಫೆ. 22ರಂದು ಕೆ.ಎಂ ವಾಸು ಎಂಬುವರನ್ನು 2020ರ ಮಾ. 10ರವರೆಗೆ ಬಿಬಿಎಂಪಿ ಹೆಬ್ಬಾಳ ವಲಯದ ಕಾರ್ಯಕಾರಿ ಇಂಜಿನಿಯರ್ ಹುದ್ದೆಗೆ ನಿಯೋಜನೆಗೊಳಿಸಿ ಆದೇಶಹೊರಡಿಸಲಾಗಿತ್ತು. ಈ ಮಧ್ಯೆ ವಾಸು ಅವರ ಜಾಗಕ್ಕೆ ಸದ್ಯ ಬಿಬಿಎಂಪಿಯಲ್ಲಿ ಎರವಲು ನಿಯೋಜನೆ ಮೇಲಿರುವ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಇಂಜಿನೀಯರ್ ಜಿ.ಆರ್. ದೇವೇಂದ್ರ ನಾಯಕ್ ಅವರನ್ನು ನಿಯೋಜನೆಗೊಳಿಸುವಂತೆ ಕೇಂದ್ರ ಸಚಿವರೊಬ್ಬರು 2019ರ ಅ. 6ಕ್ಕೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. ಇದಕ್ಕೆ ಅ.17ರಂದು ಮುಖ್ಯಮಂತ್ರಿಯವರು ಅನುಮೋದನೆ ನೀಡಿದ್ದರು. ಅದರಂತೆ, ಅ.24ರಂದು ವಾಸು ಅವರನ್ನು ವರ್ಗಾವಣೆಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದರು. ಈ ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಕೋರಿ ವಾಸು ಹೈಕೋರ್ಟ್ ಮೆಟ್ಟಿಲೇರಿದ್ದರು.