ಇಗ್ಗೋಡ್ಲುವಿನಲ್ಲಿ ರೋಟರಿ ವತಿಯಿಂದ 25 ಮನೆಗಳ ಹಸ್ತಾಂತರ

ಮಡಿಕೇರಿ- ಸೂರಿಲ್ಲದವರಿಗೆ ಮನೆ ನಿರ್ಮಿಸಿ ಸೂಕ್ತ ಆಶ್ರಯ ನೀಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಆದ್ಯತೆಯ ಮೇರೆಗೆ ಕಾರ್ಯಪ್ರವೃತ್ತವಾಗಬೇಕೆಂದು ಅಂತರರಾಷ್ಟ್ರೀಯ ರೋಟರಿಯ ಮಾಜಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ ಕರೆ ನೀಡಿದ್ದಾರೆ. ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ರೋಟರಿ ಜಿಲ್ಲೆ ೩೧೮೧ ನಿಂದ ರೀ ಬಿಲ್ಡ್ ಕೊಡಗು ಯೋಜನೆಯಡಿ ನಿರ್ಮಿಸಲಾದ ೨೫ ಮನೆಗಳನ್ನು ಜಲಪ್ರಳಯ ಸಂತ್ರಸ್ಥರಿಗೆ ಹಸ್ತಾಂತರಿಸಿ ಕಲ್ಯಾಣ್ ಬ್ಯಾನರ್ಜಿ ಮಾತನಾಡಿದರು.

ಭಾರತದಲ್ಲಿ ಹಲವಷ್ಟು ಮಂದಿಗೆ ಇನ್ನೂ ಸೂರು ದೊರಕಿಲ್ಲ. ಭಾರತದ ಅನೇಕ ನಗರಗಳ ರಸ್ತೆ ಬದಿಯಲ್ಲಿಯೇ ಜನ ರಾತ್ರಿ ಆಶ್ರಯ ಪಡೆಯುತ್ತಿರುವ ದೃಶ್ಯ ಮರೆಯಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸೂರಿಲ್ಲದವರನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ರೋಟರಿ ಮುಂದಾಗಬೇಕು, ಮುಂದಿನ ಹಂತದಲ್ಲಿ ೨೫ ಮನೆಗಳ ನಿರ್ಮಾಣಕ್ಕೆ ತಾನು ಕೂಡ ಭಾರತಾದ್ಯಂತ ರೋಟರಿ ಕ್ಲಬ್‌ಗಳ ಸಹಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಿದರಲ್ಲದೇ ಕೊಡಗಿನ ಸಂತ್ರಸ್ಥರಿಗೆ ಎಷ್ಟು ಅಗತ್ಯವಿದೆಯೋ ಅಷ್ಟೂ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿ, ತಾನು ಯೋಜನೆಗೆ ಬೆಂಬಲಿಸುವುದಾಗಿಯೂ ಹೇಳಿದರು.

ಮನೆ ನಿರ್ಮಿಸಿಕೊಡುವುದು ಪುಣ್ಯದ ಕೆಲಸವಾಗಿದ್ದು, ಪ್ರತಿರ್ಯೋವರ ಜೀವನ ಕೂಡ ಮನೆಯಿಂದಲೇ ಪ್ರಾರಂಭವಾಗುತ್ತದೆ. ಮಹಿಳೆ, ಮಕ್ಕಳಿಗೆ ಮನೆಯೇ ಭದ್ರತೆಯ ಭಾವನೆ ಮೂಡಿಸುತ್ತದೆ. ಹೀಗಿರುವಾಗ ಉತ್ತಮ ಮನೆಗಳನ್ನು ಕಡಮೆ ವೆಚ್ಚದಲ್ಲಿಯೂ ನಿರ್ಮಿಸಲು ಸಾಧ್ಯ ಎಂಬುದನ್ನು ರೋಟರಿ ಸಂಸ್ಥೆಯು ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ಮೂಲಕ ಭಾರತಾದ್ಯಂತ ಈಗಾಗಲೇ ನಿರೂಪಿಸಿದೆ ಎಂದೂ ಶ್ಲಾಘಿಸಿದರು.

ರೋಟರಿ ಜಿಲ್ಲಾ ಗವರ್ನರ್ ಪಿ.ರೋಹಿನಾಥ್ ಮಾತನಾಡಿ, ಕೊಡಗಿನಲ್ಲಿ ಜಲಪ್ರಳಯ ಸಂಭವಿಸಿದಾಗ ಸಂತ್ರಸ್ಥರಿಗೆ ಅಗತ್ಯವಿದ್ದ ಮನೆ ನಿರ್ಮಾಣಕ್ಕೆ ರೋಟರಿ ಜಿಲ್ಲೆ ೩೧೮೧ ಮುಂದಾಯಿತು. ಕೇವಲ ೩ ತಿಂಗಳಲ್ಲಿ ೨೫ ಮನೆಗಳನ್ನು ತಲಾ ೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂತ್ರಸ್ಥರಿಗೆ ಯೋಗ್ಯ ಮನೆಗಳನ್ನು ನಿಗದಿತ ಅವಧಿಯಲ್ಲಿಯೇ ನೀಡಿದ ತೃಪ್ತಿ ತನಗಿದೆ ಎಂದರು.

ರೋಟರಿಗಾಗಿ ಮನೆಗಳನ್ನು ನಿರ್ಮಿಸಿಕೊಟ್ಟ ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜನ್ ಸ್ಯಾಮುವೆಲ್ ಮಾತನಾಡಿ, ಭಾರತದಲ್ಲಿ ಶೇ. ೪೦ ರಷ್ಟು ಜನರು ವಿಕೋಪ ಸಂಭವಿಸಿದಾಗ ಸಂತ್ರಸ್ಥರಾಗುತ್ತಾರೆ. ಕೊಡಗಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯು ೨೫ ಮನೆಗಳನ್ನು ತಲಾ ೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ್ದು ೧೦ ಕುಟುಂಬಗಳಲ್ಲಿ ಮಹಿಳೆಯರೇ ನಿರ್ವಹಿಸುತ್ತಿದ್ದು ಐವರು ವಿಧವೆಯರೂ ಮನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ ರೋಟರಿಯಿಂದ ನಿರ್ಮಿಸಲಾದ ಮನೆಗಳನ್ನು ಗಣ್ಯರು ಪರಿಶೀಲಿಸಿ ಫಲಾನುಭವಿಗಳಿಗೆ ಮನೆಗಳ ಕೀಲಿಕೈ ಹಸ್ತಾಂತರಿಸಿದರು. ಕಾರ್ಯಕ್ರಮದ ನೆನಪಿಗಾಗಿ ಸಸಿಯನ್ನೂ ಕಲ್ಯಾಣ್ ಬ್ಯಾನರ್ಜಿ ನೆಟ್ಟರು. ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯಿಂದ ೨೫ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್ ಮತ್ತು ವಾಟರ್ ಫಿಲ್ಟರ್ ಗಳನ್ನು ನೀಡಲಾಯಿತು.

Leave a Reply

Your email address will not be published. Required fields are marked *

error: Content is protected !!