ವಾಹನ ಮಾರಾಟದಲ್ಲಿ ಕುಸಿತವಿದ್ದರೆ ಟ್ರಾಫಿಕ್ ಜಾಮ್ ಏಕಾಗುತ್ತಿದೆ? ಬಿಜೆಪಿ ಸಂಸದ
ನವದೆಹಲಿ: ಆಟೊಮೊಬೈಲ್ ಕ್ಷೇತ್ರದಲ್ಲಿ ಮಾರಾಟ ಇಳಿಕೆಯಾಗಿದ್ದರೆ ರಸ್ತೆಗಳಲ್ಲಿ ಟ್ರಾಫಿಕ್ ಏಕೆ ಹೆಚ್ಚುತಿದೆ? ಇದು ಯಾರೋ ಹಳ್ಳಿಗರು ಕೇಳಿದ ಪ್ರಶ್ನೆಯಲ್ಲ ಬದಲಿಗೆ ಬಿಜೆಪಿ ಲೋಕಸಭಾ ಸಂಸದ ವೀರೇಂದ್ರ ಸಿಂಗ್ ಮಾಸ್ಟ್ ಕೇಳಿದ ಪ್ರಶ್ನೆ. ಹೌದು ಗುರುವಾರ ಸಂಸತ್ತಿನಲ್ಲಿ ಮಾತನಾಡಿದ ಸಂಸದ ವೀರೇಂದ್ರ ಸಿಂಗ್ ದೇಶದಲ್ಲಿ ಯಾವುದೇ ಬಗೆಯ ಆರ್ಥಿಕ ಕುಸಿತವಿಲ್ಲ ಎಂದಿದ್ದಾರೆ. ಅಲ್ಲದೆ ವಾಹನ ಮಾರಾಟದಲ್ಲಿ ಕುಸಿತ ಕಂಡುಬಂದಿರುವುದು ಸತ್ಯವಾಗಿದ್ದರೆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಏಕಿದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರವನ್ನು ಹಳಿಯಲು ಆರ್ಥಿಕ ಮಂದಗತಿಯ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಬಲ್ಲಿಯಾದ ಸಂಸತ್ ಸದಸ್ಯರು ಹೇಳಿದ್ದಾರೆ.
“ಆರ್ಥಿಕ ಕುಸಿತವಿದೆ ಎಂಬ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರವನ್ನು ಕೆಣಕಲು ಈ ಯೋಜನೆ ರೂಪಿಸಲಾಗಿದೆ.ಸರ್ಕಾರಿ ವಲಯದವರು ಆಟೋಮೊಬೈಲ್ ಕ್ಷೇತ್ರ ಮಂದಗತಿಯಿಂದ ಸಾಗಿದೆ ಹೇಳುತ್ತಿದ್ದಾರೆ. ವಾಹನ ಮಾರಾಟದಲ್ಲಿ ಇಳಿಕೆ ಕಂಡುಬಂದರೆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಏಕೆ? ಗ್ರಾಹಕ ಮತ್ತು ಉತ್ಪಾದನೆಯ ನಡುವಿನ ಸಂಬಂಧ ಏನೆಂದು ನೀವು ಎಂದಿಗೂ ನಿರ್ಧರಿಸಲು ಸಾಧ್ಯವಿಲ್ಲ” ಅವರು ಇಂದು ಲೋಕಸಭೆಯಲ್ಲಿ ಹೇಳಿದರು.
ವಿರೋಧ ಪಕ್ಷಗಳು ಆರ್ಥಿಕತೆಯ ಪ್ರಸ್ತುತ ಸ್ಥಿತಿಯ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿವೆ ಮತ್ತು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರ ಪ್ರಮುಖ ಚರ್ಚೆಯಾಗುತ್ತಿದೆ. ಇತ್ತೀಚೆಗೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಉತ್ತರಿಸುವ ಸಂದರ್ಭದಲ್ಲಿ ಪ್ರತಿಪಕ್ಷದ ಸಂಸದರು ರಾಜ್ಯಸಭೆಯಿಂದ ಹೊರನಡೆದಿದ್ದರು.
ಭಾರತದ ಆರ್ಥಿಕ ಕುಸಿತವು ಈ ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿದೆ ಎಂದು ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಹೇಳಿದ್ದು, 2019 ರ ಕ್ಯಾಲೆಂಡರ್ ವರ್ಷದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಗೆ ಶೇಕಡಾ 5.6 ರಷ್ಟಿದೆ ಎಂದು ಮುನ್ಸೂಚನೆ ನೀಡಿದೆ.