ನಾಳೆ ಮತ ಎಣಿಕೆ : ಮೂರು ಸುತ್ತಿನ ಭದ್ರತೆ
ಉಡುಪಿ, : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಎಲ್ಲಾ ರೀತಿಯ ಸಿದ್ಧತೆಗಳು ಅಂತಿಮಘಟ್ಟ ತಲುಪಿದ್ದು, ಗುರುವಾರ ಬೆಳಿಗ್ಗೆ 8 ಗಂಟೆಗೆ ಎಣಿಕಾ ಕಾರ್ಯ ಆರಂಭವಾಗಲಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಮಂಗಳವಾರ ಮತ ಎಣಿಕೆ ನಡೆಯುವ ಸಂತ ಸಿಸಿಲಿ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು. ಗುರುವಾರ ಬೆಳಿಗ್ಗೆ 7.30 ಗಂಟೆಗೆ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ಮತ ಎಣಿಕಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎರಡು ಹಂತದ ತರಬೇತಿ ಈಗಾಗಲೇ ನೀಡಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಮತ ಎಣಿಕಾ ಕೇಂದ್ರಕ್ಕೆ ಆಗಮಿಸುವ ಚುನಾವಣಾ ಅಭ್ಯರ್ಥಿಗಳ ಪರ ಏಜೆಂಟರಿಗೆ ಪಾಸುಗಳನ್ನು ನೀಡಲಾಗಿದೆ. ಪಾಸುಗಳನ್ನು ಹೊಂದಿಲ್ಲದ ಯಾರಿಗೂ ಮತ ಎಣಿಕಾ ಕೇಂದ್ರಕ್ಕೆ ಒಳಗೆ ಪ್ರವೇಶಿಸಲು ಬಿಡುವುದಿಲ್ಲ. ಅಲ್ಲದೇ, ಅಧಿಕಾರಿಗಳೂ ಸೇರಿದಂತೆ ಯಾರಿಗೂ ಒಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಅವರು ತಿಳಿಸಿದರು.
ಮತ ಎಣಿಕೆ ನಡೆದು ಪ್ರತಿಯೊಂದು ಸುತ್ತಿನ ಮತ ಗಳಿಕೆ ಮಾಹಿತಿಯನ್ನು ತ್ವರಿತವಾಗಿ ಸಾರ್ವಜನಿಕರಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮೂರು ಸುತ್ತಿನ ಭದ್ರತೆ: ಮತ ಎಣಿಕೆ ನಡೆಯುವ ಕೇಂದ್ರಕ್ಕೆ 3 ಹಂತಗಳ ಭದ್ರತೆಯನ್ನು ಒದಗಿಸಲಾಗುತ್ತಿದೆ. ಸುಮಾರು 300 ಪೊಲೀಸರನ್ನೊಳಗೊಂಡ ಜಿಲ್ಲಾ ಪೊಲೀಸ್, ಕೆಎಸ್‍ಆರ್‍ಪಿಯ 3 ತಂಡ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್)ನ ಒಂದು ಪ್ಲಟೂನ್ ತಂಡವು ಈ ಭದ್ರತೆಯನ್ನು ನಿರ್ವಹಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ತಿಳಿಸಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕಾ ಪ್ರಕ್ರಿಯೆಗೆ ಕೇಂದ್ರ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ವೀಕ್ಷಕ ನಿತೇಶ್ವರ ಕುಮಾರ್ ಅವರು ಇಂದು ಸಂದರ್ಭದಲ್ಲಿ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.