ನಾಳೆ: ರಾಜ್ಯಮಟ್ಟದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ

ಉಡುಪಿ: ‘ರಾಜ್ಯಮಟ್ಟದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ–2019 ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಆವರಣದಲ್ಲಿ ನಡೆಯಲಿದೆ’ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಮತ್ತು ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಸಪ್ತಾಹವನ್ನು ಉದ್ಘಾಟಿಸುವರು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಕಾರಿ ಧ್ವಜಾರೋಹಣ ನೆರವೇರಿಸುವರು’ ಎಂದರು.

‘ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಮಾಡುವರು. ಸಂಸದೆ ಶೋಭಾ ಕರಂದ್ಲಾಜೆ ಮಾರಾಟ ಮಳಿಗೆಯನ್ನು ಉದ್ಘಾಟಿಸುವರು. ಕರ್ನಾಟಕಚ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌ ಸಹಕಾರ ಜಾಥಕ್ಕೆ ಚಾಲನೆ ನೀಡುವರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್‌. ಗಂಗಣ್ಣ ಸಹಕಾರ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸುವರು’ ಎಂದು ತಿಳಿಸಿದರು.


‘ಸರ್ಕಾರದ ಬಹುತೇಕ ಜನಪರ ಯೋಜನೆಗಳು ಸಹಕಾರಿ ಸಂಘಗಳ ಮೂಲಕ ಕಾರ್ಯಗತವಾಗುತ್ತಿದೆ. ಹಾಗಾಗಿ ಸಪ್ತಾಹದ ಅವಧಿಯಲ್ಲಿ ಗ್ರಾಮೀಣ ಮಹಿಳೆಯರು ಮತ್ತು ಯುವಜನರು ವಿಶೇಷ ಆಸಕ್ತಿ ವಹಿಸಿ ಅತ್ಯಧಿಕ ಸಂಖ್ಯೆಯಲ್ಲಿ ಸಹಕಾರಿ ಕ್ಷೇತ್ರಕ್ಕೆ ಬರುವಂತೆ ಮಾಡಬೇಕು. ಸಹಕಾರ ತತ್ವ ಕೇವಲ ತತ್ವವಲ್ಲ, ಅದೊಂದು ಜೀವನ ವಿಧಾನ ಎಂಬುವುದನ್ನು ಯುವಜನತೆಗೆ ಮನದಟ್ಟು ಮಾಡಬೇಕು’ ಎಂದರು.

‘ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಒಕ್ಕೂಟ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಮೊದಲಾದ ವಿವಿಧ ಸಹಕಾರ ಸಂಘಗಳ ಸಹಯೋಗದಲ್ಲಿ ಈ ಸಪ್ತಾಹವನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.

ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಬೆಳಪು ದೇವಿಪ್ರಸಾದ್‌ ಶೆಟ್ಟಿ, ಅಶೋಕ್‌ ಕುಮಾರ್‌ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕರಾದ ಹರೀಶ್‌ ಕಿಣಿ, ಕೆ.ಎಸ್‌. ಶ್ರೀಧರ್‌ ಇದ್ದರು.

‘ಮೂರು ಸಾವಿರ ಜನರ ನಿರೀಕ್ಷೆ’

ಸಪ್ತಾಹದ ಸಭಾಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 9ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಅಮ್ಮಣ್ಣಿ ರಾಮಣ್ಣ ಸಭಾಂಗಣದ ವರೆಗೆ ಸಹಕಾರಿ ಜಾಥ ನಡೆಯಲಿದೆ. ಜಾಥದಲ್ಲಿ ಸುಮಾರು 3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಹಾಗೆಯೇ 15ಕ್ಕೂ ಅಧಿಕ ವಿವಿಧ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಟ್ಯಾಬ್ಲೊಗಳು, ಸಹಕಾರ ಸಂಘಗಳ ನಿರ್ದೇಶಕರ ಮತ್ತು ಸಿಬ್ಬಂದಿಯ ಆಕರ್ಷಕ ಪಥ ಸಂಚಲನ ಜರುಗಲಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!